ಪುತ್ತೂರು, ಮೇ 23: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಮೂರು ಪರಿಶಿಷ್ಟ ಪಂಗಡದ ಕುಟುಂಬಗಳಿಗೆ ಹಕ್ಕುಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ನೇತೃತ್ವದಲ್ಲಿ ನಡೆದ ಧರಣಿ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ.
ಅಂಬೇಡ್ಕರ್ ತತ್ವ ರಕ್ಷಣಾ ಸಮಿತಿಯ ಅಧ್ಯಕ್ಷ ಗಿರಿಧರ್ ನಾಯ್ಕ ನೇತೃತ್ವದಲ್ಲಿ ನಡೆದ ಪ್ರತಿಭಟನೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ ಹಾಗೂ ಪುತ್ತೂರು ಮತ್ತು ಬಂಟ್ವಾಳ ಬಿಜೆಪಿ ಘಟಕಗಳು ಬೆಂಬಲ ವ್ಯಕ್ತಪಡಿಸಿದ್ದವು.
ಪ್ರತಿಭಟನೆ ಮುಂದುವರಿದ ಸಂದರ್ಭದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು. ಬಳಿಕ ತಹಶೀಲ್ದಾರ್ ಜೊತೆ ಚರ್ಚೆ ನಡೆಸಿದ ಅವರು, ಮೇ 26ರಂದು ಪೆರ್ನೆ ಗ್ರಾಮದಲ್ಲಿ ನಡೆಯುವ ಬಗರ್ ಹುಕುಂ ಸಭೆಯಲ್ಲಿ ಹಕ್ಕುಪತ್ರ ವಿತರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
“ನಿಗದಿತ ದಿನಾಂಕದಂದು ಹಕ್ಕುಪತ್ರ ನೀಡದಿದ್ದರೆ ಮತ್ತೆ ಪ್ರತಿಭಟನೆ ಮುಂದುವರಿಸಲು ನಾನು ಸಹ ಸಂಪೂರ್ಣ ಬೆಂಬಲ ನೀಡುತ್ತೇನೆ” ಎಂದು ಶಾಸಕ ರಾಜೇಶ್ ನಾಯ್ಕ್ ಹೇಳಿದರು.
ನಂತರ ಪುತ್ತೂರು ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಧರಣಿ ಸ್ಥಳಕ್ಕೆ ಭೇಟಿ ನೀಡಿ ತಹಶೀಲ್ದಾರ್‌ನಿಂದ ಲಿಖಿತ ಭರವಸೆ ಪಡೆದ ಬಳಿಕ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಯಿತು.
ಈ ಸಂದರ್ಭದಲ್ಲಿ ದಯಾನಂದ ಶೆಟ್ಟಿ ಉಜ್ರೆಮಾರು, ಚೆನ್ನಪ್ಪ ಕೋಟ್ಯಾನ್, ಸುದರ್ಶನ್ ಬಜ, ಹರೀಶ್ ಬಿಜತ್ರೆ, ಹರಿಪ್ರಸಾದ್ ಯಾದವ್, ಲೋಕೇಶ್ ಚಾಕೋಟೆ, ವಿದ್ಯಾಧರ್ ಜೈನ್, ರಾಜೇಶ್ ಬಾಳೆಕಲ್ಲು, ಉದಯ ವಿಟ್ಲ, ಹರೀಶ್ ವಿಟ್ಲ ಸೇರಿದಂತೆ ಹಲವರು ಉಪಸ್ಥಿತರಿದ್ದರು.