ಕಾಸರಗೋಡು: ಗಡಿನಾಡ ಕಾಸರಗೋಡಿನ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನಿರಂತರ ಬೆಂಬಲ ನೀಡುತ್ತಾ, ಅಂತರಧರ್ಮೀಯ ಸೌಹಾರ್ದದ ಪ್ರತೀಕವಾಗಿ ಗುರುತಿಸಿಕೊಂಡಿದ್ದ ವರ್ಕಾಡಿ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಚರ್ಚ್‌ನ ಧರ್ಮಗುರು ಅತೀ ವಂದನೀಯ ಫಾದರ್ ಬಾಸಿಲ್ ವಾಸ್ ಅವರು ಇದೀಗ ಹೊಸ ಜವಾಬ್ದಾರಿಯೊಂದಿಗೆ ಮಂಗಳೂರಿನ ಬೊಂದೆಲ್ ಚರ್ಚ್‌ಗೆ ವರ್ಗಾವಣೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಕನ್ನಡ ಕಾರ್ಯನಿರತ ಪತ್ರಕರ್ತರ ಶ್ರೇಯೋಭಿವೃದ್ಧಿ ಸಂಘ ಮತ್ತು ವಿವಿಧ ಕನ್ನಡ ಸಂಘಟನೆಗಳ ವತಿಯಿಂದ ಅದ್ಧೂರಿಯಾಗಿ ಅಭಿನಂದನೆ ಸಲ್ಲಿಸಲಾಯಿತು.
ಕನ್ನಡ ಪತ್ರಕರ್ತರ ಸಂಘದ ಅಧ್ಯಕ್ಷ ರವಿ ನಾಯ್ಕಾಪು ಅವರ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ, ಫಾದರ್ ಬಾಸಿಲ್ ವಾಸ್ ಅವರ ನಿಸ್ವಾರ್ಥ ಸೇವೆಯನ್ನು ಗಣ್ಯರು ಸ್ಮರಿಸಿದರು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ್ಯಕಟ್ಟೆ, ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ರಾಧಾಕೃಷ್ಣ ಉಳಿಯತ್ತಡ್ಕ, ಗಮಕ ಪರಿಷತ್ತಿನ ಅಧ್ಯಕ್ಷ ಶಂಕರ ನಾರಾಯಣ ಭಟ್ ಮತ್ತು ಕನ್ನಡ ಹೋರಾಟಗಾರ ಗಣೇಶ ಪ್ರಸಾದ್ ಪಾಣೂರು ಅವರು ಉಪಸ್ಥಿತರಿದ್ದು, ಫಾದರ್ ಅವರ ಸಾಂಸ್ಕೃತಿಕ ಬದ್ಧತೆಯನ್ನು ಕೊಂಡಾಡಿದರು.
ಬೇಳ ಶೋಕಮಾತ ದೇವಾಲಯ ಮತ್ತು ವರ್ಕಾಡಿ ಇಗರ್ಜಿಯಲ್ಲಿ ದೀರ್ಘಕಾಲದ ಸೇವೆ ಸಲ್ಲಿಸಿದ ಫಾದರ್ ಬಾಸಿಲ್ ವಾಸ್, ಕಾಸರಗೋಡಿನ ಕನ್ನಡ ಬಂಧುಗಳ ಸಹಕಾರವನ್ನು ಕೃತಜ್ಞತೆಯಿಂದ ಸ್ಮರಿಸಿದರು. ಗಡಿನಾಡಿನ ನೆಲದಲ್ಲಿ ತಾನು ಕಳೆದ ಕ್ಷಣಗಳು ಮತ್ತು ಇಲ್ಲಿನ ಭಾಷಾಭಿಮಾನಿಗಳಿಂದ ದೊರೆತ ಪ್ರೀತಿ ತನ್ನ ಜೀವನದ ಮರೆಯಲಾಗದ ನೆನಪುಗಳೆಂದು ಅವರು ಈ ಸಂದರ್ಭದಲ್ಲಿ ಭಾವುಕರಾಗಿ ನುಡಿದರು