ಮಂಜೇಶ್ವರದಲ್ಲಿ ಯುವಕನ ನಿಗೂಢ ಸಾವು: ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ

ಮಂಜೇಶ್ವರ ವ್ಯಾಪ್ತಿಯ ಪೈವಳಿಕೆ ಬಾಯಾರುಪದವಿನ ನಿವಾಸಿ ಮೊಹಮ್ಮದ್ ಆಸಿಫ್ (29) ಅವರ ನಿಗೂಢ ಸಾವು ಪ್ರಕರಣ ಇದೀಗ ಹೈಕೋರ್ಟ್ ಗಮನ ಸೆಳೆದಿದೆ.

2025ರ ಜನವರಿ 15ರಂದು ಫೋನ್ ಕರೆ ಸ್ವೀಕರಿಸಿ ಮನೆಯಿಂದ ಹೊರಬಂದಿದ್ದ ಆಸಿಫ್, ಕೆಲವೇ ಗಂಟೆಗಳ ಬಳಿಕ ಗಂಭೀರ ಗಾಯಗಳೊಂದಿಗೆ ರಸ್ತೆ ಬದಿಯಲ್ಲಿ ಪತ್ತೆಯಾಗಿದ್ದರು. ತಕ್ಷಣ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಪ್ರಕರಣವನ್ನು ಪೊಲೀಸರು ಆರಂಭದಲ್ಲಿ ಅಸಹಜ ಸಾವು ಎಂದು ದಾಖಲಿಸಿಕೊಂಡಿದ್ದರು.

ಆದರೆ, ಘಟನೆ ನಡೆದ ಸ್ಥಳದ ಸಮೀಪ ಲಾರಿ ಹಾಗೂ ಅದರ ಬಾಗಿಲಿನಲ್ಲಿ ರಕ್ತದ ಕಲೆಗಳು ಪತ್ತೆಯಾಗಿರುವ ಹಿನ್ನೆಲೆ, ಇದು ಅಪಘಾತವಲ್ಲ; ಪೂರ್ವಯೋಜಿತ ಕೊಲೆ ಎಂದು ಕುಟುಂಬದವರು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮೃತ ಆಸಿಫ್ ಅವರ ತಾಯಿ ಸಕೀನ ಅವರು ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸದಿರುವುದಕ್ಕೆ ಕಾರಣವೇನು ಎಂಬುದರ ಕುರಿತು ಪೊಲೀಸರಿಂದ ಸ್ಪಷ್ಟನೆ ಕೇಳಿ ನೋಟಿಸ್ ಜಾರಿಗೊಳಿಸಿದೆ.

ಸದ್ಯ ಪ್ರಕರಣದ ತನಿಖೆಯನ್ನು ಜಿಲ್ಲಾ ಕ್ರೈಂ ಬ್ರಾಂಚ್ ನಡೆಸುತ್ತಿದ್ದು, ಹೈಕೋರ್ಟ್‌ನ ಮುಂದಿನ ಆದೇಶ ಪ್ರಕರಣದ ತನಿಖೆಯ ದಿಕ್ಕನ್ನೇ ಬದಲಾಯಿಸುವ ಸಾಧ್ಯತೆ ಇದೆ. ಕುಟುಂಬಕ್ಕೆ ನ್ಯಾಯ ಸಿಗುತ್ತದೆಯೇ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!