ಗಾಯಗೊಂಡು ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾದ ಕಾಡುಬೆಕ್ಕನ್ನು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಉಡುಪಿ ಜಿಲ್ಲೆಯ ಕಲ್ಯಾಣಪುರ ಹಾಳೆಕಟ್ಟೆ ಪ್ರದೇಶದಲ್ಲಿ ನಡೆದಿದೆ.
ಬೀದಿನಾಯಿಗಳ ದಾಳಿಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಕಾಡುಬೆಕ್ಕು ರಸ್ತೆಯ ಬದಿಯಲ್ಲಿ ಅಸಹಾಯಕವಾಗಿ ಪಡಕೊಂಡಿರುವುದನ್ನು ಸ್ಥಳೀಯರಾದ ರವಿ (ಮೆಸ್ಕಾಂ) ಗಮನಿಸಿ, ತಕ್ಷಣ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದರು. ಮಾಹಿತಿ ಪಡೆದ ಅವರು ಸ್ಥಳಕ್ಕೆ ಧಾವಿಸಿ ಕಾಡುಬೆಕ್ಕನ್ನು ಸುರಕ್ಷಿತವಾಗಿ ರಕ್ಷಿಸಿದರು.
ನಂತರ ಅರಣ್ಯ ಇಲಾಖೆಗೆ ಹಸ್ತಾಂತರಿಸಲ್ಪಟ್ಟ ಕಾಡುಬೆಕ್ಕಿಗೆ ಗಸ್ತು ಅರಣ್ಯಪಾಲಕರು ಚಿಕಿತ್ಸೆ ನೀಡಿದ್ದು, ಆರೋಗ್ಯ ಸ್ಥಿತಿ ಸುಧಾರಿಸಿದ ಬಳಿಕ ಮತ್ತೆ ಅರಣ್ಯಕ್ಕೆ ಬಿಡಲಾಗಿದೆ.
ಸಮಯೋಚಿತವಾಗಿ ಕಾರ್ಯನಿರ್ವಹಿಸಿದ ಸ್ಥಳೀಯರು ಮತ್ತು ಸಮಾಜಸೇವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.