ಅಡ್ಯಾರ್ ಗಾರ್ಡನ್‌ನಲ್ಲಿ ‘ಪಟ್ಲ ಸಂಭ್ರಮ-2026’ ವೈಭವ; ವಿದ್ಯಾರ್ಥಿವೇತನ, ಸನ್ಮಾನ ಸಮಾರಂಭಕ್ಕೆ ಮೆರುಗು

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ವತಿಯಿಂದ ಆಯೋಜಿಸಲಾದ ‘ಪಟ್ಲ ಸಂಭ್ರಮ-2026’, ಸನ್ಮಾನ ಸಮಾರಂಭ ಹಾಗೂ ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮವು ನಗರದ ಅಡ್ಯಾರ್ ಗಾರ್ಡನ್‌ನಲ್ಲಿ ವೈಭವದಿಂದ ನಡೆಯಿತು.

ಕಾರ್ಯಕ್ರಮವನ್ನು ಉದ್ಯಮಿ ಶಶಿಧರ ಶೆಟ್ಟಿ ಬರೋಡಾ ಉದ್ಘಾಟಿಸಿ ಮಾತನಾಡಿ, ನಾಲ್ಕು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮೂರು ಸಾವಿರ ರೂ ವಿದ್ಯಾರ್ಥಿವೇತನ, ಕಲಾವಿದರಿಗಾಗಿ ವಿಮಾ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಯಕ್ಷಧ್ರುವ ಫೌಂಡೇಶನ್ ಯಶಸ್ವಿಯಾಗಿ ನಡೆಸುತ್ತಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.

“ದಾನ ಮಾಡುವ ಸಂಕಲ್ಪ ಇದ್ದರೆ ದೇವರ ಅನುಗ್ರಹವೂ ಜೊತೆಯಾಗುತ್ತದೆ. ಸಮಾಜದ ಸಹಕಾರದಿಂದಲೇ ಇಂತಹ ಸಂಘಟನೆಗಳು ಬೆಳೆಯಲು ಸಾಧ್ಯವಾಗುತ್ತದೆ. ಯಕ್ಷಗಾನ ಸಮುದ್ರಯಾನ ಯೋಜನೆಯಡಿ ಮುಂಬೈನಿಂದ ಲಕ್ಷದ್ವೀಪದವರೆಗೆ ಯಕ್ಷಗಾನವನ್ನು ಕೊಂಡೊಯ್ಯುವ ವಿಶಿಷ್ಟ ಪ್ರಯತ್ನ ನಡೆಯುತ್ತಿದ್ದು, ಸಮುದ್ರ ಮಧ್ಯದಲ್ಲಿ ‘ದೇವೀ ಮಹಾತ್ಮೆ’ ಹಾಗೂ ‘ಸಮುದ್ರಮಂಥನ’ ಪ್ರಸಂಗ ಪ್ರದರ್ಶನಗೊಳ್ಳಲಿದೆ. ಯಕ್ಷಗಾನ ಕಲೆಯು ಮತ್ತಷ್ಟು ಉನ್ನತ ಮಟ್ಟಕ್ಕೆ ಬೆಳೆಯಬೇಕು ಹಾಗೂ ಕಲಾವಿದರು ಆರ್ಥಿಕವಾಗಿ ಸದೃಢರಾಗಬೇಕು” ಎಂದು ಆಶಿಸಿದರು.

ತುಳುವರ ಹೆಮ್ಮೆಯ ಸಂಭ್ರಮ: ಒಡಿಯೂರು ಶ್ರೀಆಶೀರ್ವಚನ ನೀಡಿದ ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ, ತುಳುವರ ಮನಸ್ಸಿನಲ್ಲಿ ಯಕ್ಷಗಾನವು ವಿಶ್ವಾಸದ ಪ್ರತೀಕವಾಗಿ ಬೆಳೆದಿದೆ ಎಂದು ಹೇಳಿದರು.

“ನಾಡಿನಲ್ಲಷ್ಟೇ ಅಲ್ಲ, ಸಮುದ್ರದ ಆಚೆಯೂ ಯಕ್ಷಗಾನ ಪಸರಿಸುತ್ತಿದೆ. ಈಗ ಕಡಲಿನ ಮಧ್ಯದಲ್ಲಿಯೇ ಯಕ್ಷಗಾನ ಪ್ರದರ್ಶನಗೊಳ್ಳುತ್ತಿರುವುದು ತುಳುವರ ಸಾಧನೆ. ‘ಪಟ್ಲ’ ಎಂಬ ಹೆಸರಿನಲ್ಲಿ ಬೆಳೆದಿರುವ ಈ ಮಹಾವೃಕ್ಷ ಅನೇಕರಿಗೆ ನೆರಳಾಗುತ್ತಿದೆ. ಕಲಾವಿದರ ಸಂಕಷ್ಟವನ್ನು ಅರಿತು ಸಮಾಜಸೇವೆಯ ಮೂಲಕ ಮಾನವಸೇವೆಯೇ ಮಾಧವಸೇವೆ ಎಂಬ ಸಂದೇಶವನ್ನು ಪಟ್ಲ ಸತೀಶ್ ಶೆಟ್ಟಿಯವರು ಸಾರುತ್ತಿದ್ದಾರೆ. ಇದು ನಮ್ಮ ಊರಿನ ಸಂಭ್ರಮ ಮಾತ್ರವಲ್ಲ, ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವ ಕಾರ್ಯಕ್ರಮವಾಗಿದೆ” ಎಂದು ಹೇಳಿದರು.

ಯಕ್ಷಗಾನವು ಬದುಕಿಗೆ ಶಕ್ತಿ ತುಂಬುವ ರಮ್ಯ ರಂಗಕಲೆಯಾಗಿದ್ದು, ಇಂದು ವಿದ್ಯಾವಂತರೂ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದತ್ತ ಆಕರ್ಷಿತರಾಗುತ್ತಿರುವುದು ಸಂತಸದ ಬೆಳವಣಿಗೆ ಎಂದು ಅವರು ಅಭಿಪ್ರಾಯಪಟ್ಟರು.

ಯಕ್ಷಗಾನ ಕ್ಷೇತ್ರದ ಸೆಲೆಬ್ರಿಟಿ ಪಟ್ಲ: ಡಾ. ಮೋಹನ್ ಆಳ್ವ

2026ರ ಯಕ್ಷಧ್ರುವ ಮಹಾಪೋಷಕ ಪ್ರಶಸ್ತಿ ಸ್ವೀಕರಿಸಿದ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಮಾತನಾಡಿ, ಯಕ್ಷಗಾನ ಕ್ಷೇತ್ರದಲ್ಲಿ ಪಟ್ಲ ಸತೀಶ್ ಶೆಟ್ಟಿಯವರು ಮಾಡಿರುವ ಸಾಧನೆಯಿಂದ ಅವರು ಇಂದು ಸೆಲೆಬ್ರಿಟಿಯಾಗಿ ಹೊರಹೊಮ್ಮಿದ್ದಾರೆ ಎಂದು ಹೇಳಿದರು.

“ಯಕ್ಷಗಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದು ದೇಶ-ವಿದೇಶಗಳಲ್ಲಿ ಫೌಂಡೇಶನ್ ಮೂಲಕ ಯಕ್ಷಗಾನದ ವೈಭವವನ್ನು ಪರಿಚಯಿಸುತ್ತಿರುವುದರ ಜೊತೆಗೆ ಸಾಮಾಜಿಕ ಸೇವೆಯನ್ನೂ ಮಾಡುತ್ತಿದ್ದಾರೆ. ಯಕ್ಷಗಾನವು ನಮ್ಮ ದೇಶದ ಅಮೂಲ್ಯ ಸಾಂಸ್ಕೃತಿಕ ಸಂಪತ್ತು. ಕಾಲಕ್ಕೆ ತಕ್ಕಂತೆ ಯಕ್ಷಗಾನ ಬೆಳೆಯುತ್ತಾ ಸಾಗುತ್ತಿರುವುದು ಸಂತಸದ ವಿಚಾರ. ಜಾನಪದ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಅಗ್ರಸ್ಥಾನದಲ್ಲಿದೆ” ಎಂದು ಅವರು ಹೇಳಿದರು.

ಯಕ್ಷಗಾನ ವಿಶ್ವವ್ಯಾಪಿಯಾಗಲು ಪಟ್ಲ ಯಕ್ಷಧ್ರುವ ಕಾರಣ: ಡಾ. ಸದಾಶಿವ ಶೆಟ್ಟಿ ಕನ್ಯಾನ

ಸಂಸ್ಥೆಯ ಗೌರವಾಧ್ಯಕ್ಷ ಡಾ. ಸದಾಶಿವ ಶೆಟ್ಟಿ ಕನ್ಯಾನ ಮಾತನಾಡಿ, ಯಕ್ಷಗಾನವನ್ನು ಉಳಿಸಿ, ಬೆಳೆಸಿ ವಿಶ್ವದಾದ್ಯಂತ ಪಸರಿಸುವಲ್ಲಿ ಪಟ್ಲ ಯಕ್ಷಧ್ರುವ ಸಂಸ್ಥೆಯ ಪಾತ್ರ ಅಪಾರವಾಗಿದೆ ಎಂದು ಹೇಳಿದರು.

“ಒಂದು ಕಾಲದಲ್ಲಿ ತುಳುನಾಡಿನ ಗಡಿಗಳಲ್ಲೇ ಸೀಮಿತವಾಗಿದ್ದ ಯಕ್ಷಗಾನ ಇಂದು ಜಗತ್ತಿನಾದ್ಯಂತ ಪರಿಚಿತವಾಗಲು ಈ ಸಂಸ್ಥೆಯ ಕೊಡುಗೆ ಮಹತ್ವದ್ದಾಗಿದೆ. ಯಕ್ಷಗಾನವು ಪುರಾಣಗಳ ಸಾರವನ್ನು ಇಂದಿನ ಪೀಳಿಗೆಗೆ ತಲುಪಿಸುವ ಅತ್ಯುತ್ತಮ ಮಾಧ್ಯಮವಾಗಿದೆ” ಎಂದು ತಿಳಿಸಿದರು.

ಪಟ್ಲ ಸತೀಶ್ ಶೆಟ್ಟಿಯವರ ನಾಯಕತ್ವವನ್ನು ಶ್ಲಾಘಿಸಿದ ಅವರು, “ಯಾವುದೇ ಸಂಘಟನೆ ಯಶಸ್ವಿಯಾಗಲು ಸಮರ್ಥ ನಾಯಕತ್ವ ಅತ್ಯಗತ್ಯ. ಪಟ್ಲ ಸತೀಶ್ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಸಂಸ್ಥೆ ಉನ್ನತ ಮಟ್ಟಕ್ಕೆ ಬೆಳೆದಿದೆ. ದಾನಿಗಳಿಂದ ದೊರೆಯುವ ನೆರವು ಸಮರ್ಪಕವಾಗಿ ಬಳಕೆಯಾಗುತ್ತಿದ್ದು, ಅನೇಕ ಕಲಾವಿದರ ಬದುಕಿನಲ್ಲಿ ಆಶಾಕಿರಣವಾಗಿ ಪರಿಣಮಿಸಿದೆ” ಎಂದು ಹೇಳಿದರು.

ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ

ಈ ಸಂದರ್ಭದಲ್ಲಿ ಹಿರಿಯ ಯಕ್ಷಗಾನ ಭಾಗವತ ಹಾಗೂ ವಿದ್ವಾಂಸ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ ಅವರಿಗೆ 2026ರ ಯಕ್ಷಧ್ರುವ ಪಟ್ಲ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಗಣ್ಯರ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ರಾಜೇಶ್ ಪ್ರಸಾದ್, ದಿವಾಕರ ರಾವ್ ಕಟೀಲ್, ಪ್ರೊ. ಎಂ.ಎಲ್. ಸಾಮಗ, ರಘುರಾಮ ಶೆಟ್ಟಿ ಕನ್ಯಾನ, ಯೋಗೀಂದ್ರ ಭಟ್, ಕೆ.ಎಂ. ಶೆಟ್ಟಿ, ವೇಣುಗೋಪಾಲ ಶೆಟ್ಟಿ, ಮಹಾಬಲ ಶೆಟ್ಟಿ, ವಿಠಲ ಶೆಟ್ಟಿ ಶೇಡಿಗೋಡು, ಲೀಲಾಧರ ಶೆಟ್ಟಿ, ವಸಂತ ಶೆಟ್ಟಿ ಬೆಳ್ಳಾರೆ, ಅಶೋಕ್ ಶೆಟ್ಟಿ, ವಿಜಯ ಶೆಟ್ಟಿ, ಕನ್ಯಾನ ಚಂದ್ರಹಾಸ ಶೆಟ್ಟಿ, ಭುವನೇಶ್ ಪಾಂಚನಡ್ಕ, ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

ಯಕ್ಷಧ್ರುವದ ಅಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಅತಿಥಿಗಳನ್ನು ಸ್ವಾಗತಿಸಿದರು. ನವನೀತ್ ಶೆಟ್ಟಿ ಕದ್ರಿ ಕಾರ್ಯಕ್ರಮ ನಿರೂಪಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!