ಮಂಗಳೂರು:
ಶಾಲೆ ಮತ್ತು ಅಂಗನವಾಡಿ ದುರಸ್ತಿ ಕಾರ್ಯ ಅನುದಾನದ ಕೊರತೆ ಹಾಗೂ ಇತರ ಕಾರಣಗಳಿಂದ ತುರ್ತಾಗಿ ನಡೆಸಲು ಸಾಧ್ಯವಾಗಿರಲಿಲ್ಲ. ಈ ಬಾರಿ ಈಗಾಗಲೇ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮೂಲಕ 91 ಶಾಲೆ ಗಳು, 137 ಅಂಗನವಾಡಿಗಳ ದುರಸ್ತಿಗೆ ಅನುಮೋದನೆ ನೀಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿರುವ ಅವರು, ಅಂಗನವಾಡಿಗಳಿಗೆ 2.5 ಕೋಟಿ ರೂ. ಹಾಗೂ ಶಾಲೆಗಳನ್ನು 1.5 ಕೋಟಿ ರೂ. ವೆಚ್ಚದಲ್ಲಿ ತುರ್ತಾಗಿ ದುರಸ್ತಿ ಮಾಡಲು ಅನುಮೋದನೆ ನೀಡಲಾಗಿದೆ. ಇದಲ್ಲದೆ, ಈ ಬಾರಿ ಮಳೆಗಾಲದಲ್ಲಿ ಯಾವುದೇ ಶಾಲೆ, ಅಂಗನವಾಡಿ, ಆಸ್ಪತ್ರೆಗಳು ದುರಸ್ತಿ ಅಗತ್ಯವಿದ್ದಲ್ಲಿ ಮುಂದಿನ ದಿನ ಗಳಲ್ಲಿ ಅದಕ್ಕೂ ಅನುದಾನ ಒದಗಿಸಲಾಗುವುದು. ತುಂಬಾ ಪ್ರಮಾಣದ ದುರಸ್ತಿ ಇರುವ ಸಂಸ್ಥೆಗಳಲ್ಲಿ ಮಕ್ಕಳನ್ನಾ ಗಲಿ, ಸಾರ್ವಜನಿಕರನ್ನಾಗಲಿ ಇರದಂತೆ, ಅಂತಹ ಕಟ್ಟಡಗಳನ್ನು ಉಪಯೋಗಿಸದಂತೆ ಎಲ್ಲಾ ತಾಲೂಕಿನ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.
ಸಂಬಂಧಪಟ್ಟ ಇಲಾಖೆಗಳು ಅಂತಹ ದುಸ್ಥಿತಿಯಲ್ಲಿರುವ, ಕುಸಿಯುವ ಭೀತಿಯಲ್ಲಿರುವ ಕಟ್ಟಡಗಳನ್ನು ಪತ್ತೆಹಚ್ಚಿ ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದರು.