ಮಳೆಗಾಲದ ಅಬ್ಬರ: ಮಲ್ಪೆ ಬೀಚ್‌ನಲ್ಲಿ ಸಮುದ್ರ ಪ್ರವೇಶ ನಿಷೇಧ

ಉಡುಪಿ: ಮಳೆಗಾಲ ಆರಂಭವಾಗುತ್ತಿದ್ದಂತೆ ಕರಾವಳಿ ಭಾಗದಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅಪಾಯಕಾರಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಪ್ರವಾಸಿಗರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉಡುಪಿ ಜಿಲ್ಲೆಯ ಮಲ್ಪೆ ಬೀಚ್‌ನಲ್ಲಿ ಸಮುದ್ರಕ್ಕೆ ಇಳಿಯುವುದನ್ನು ಜಿಲ್ಲಾಡಳಿತ ನಿಷೇಧಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ತಡೆಬೇಲಿ ಅಳವಡಿಸಲಾಗಿದೆ.

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಮಲ್ಪೆ ಬೀಚ್‌ಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಮಳೆಗಾಲದಲ್ಲಿ ಸಮುದ್ರದ ಸ್ವಭಾವ ಕ್ಷಣಕ್ಷಣಕ್ಕೂ ಬದಲಾಗುತ್ತಿದ್ದು, ಗಾಳಿ ಒತ್ತಡ ಹೆಚ್ಚಾದಂತೆ ಅಲೆಗಳ ಅಬ್ಬರ ತೀವ್ರಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಸಂಭವನೀಯ ಅಪಾಯಗಳನ್ನು ತಪ್ಪಿಸಲು ಸಮುದ್ರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಫಿಶ್‌ನೆಟ್ ಬಳಸಿ 10 ಅಡಿ ಎತ್ತರದ ತಡೆಬೇಲಿ ನಿರ್ಮಿಸಲಾಗಿದ್ದು, ಸಮುದ್ರ ತೀರದುದ್ದಕ್ಕೂ ಅಪಾಯ ಸೂಚಕ ಬಾವುಟಗಳು ಹಾಗೂ ಎಚ್ಚರಿಕೆ ಫಲಕಗಳನ್ನು ಅಳವಡಿಸಲಾಗಿದೆ. ಸೆಪ್ಟೆಂಬರ್ 15ರವರೆಗೆ ಪ್ರವಾಸಿಗರಿಗೆ ಸಮುದ್ರಕ್ಕೆ ಇಳಿಯುವುದನ್ನು ನಿಷೇಧಿಸಲಾಗಿದೆ.

ತಡೆಬೇಲಿಯ ಜೊತೆಗೆ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಟೂರಿಸ್ಟ್ ಪೊಲೀಸ್, ಲೈಫ್‌ಗಾರ್ಡ್, ಪೊಲೀಸ್ ಸಿಬ್ಬಂದಿ ಹಾಗೂ ಹೋಂ ಗಾರ್ಡ್‌ಗಳನ್ನು ನಿಯೋಜಿಸಿ ನಿರಂತರ ನಿಗಾ ವಹಿಸಲಾಗಿದೆ.

ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಮಲ್ಪೆ ಬೀಚ್‌ಗೆ ಆಗಮಿಸುವ ಪ್ರವಾಸಿಗರಿಗೆ ಈ ನಿರ್ಬಂಧ ನಿರಾಸೆ ಉಂಟುಮಾಡಿದೆ. ಸಮುದ್ರ ತೀರದಲ್ಲಿ ನಿಂತು ಅರಬ್ಬಿ ಸಮುದ್ರದ ರುದ್ರರಮಣೀಯ ಸೌಂದರ್ಯವನ್ನು ವೀಕ್ಷಿಸುವ ಅವಕಾಶ ಇದ್ದರೂ, ಅಲೆಗಳೊಂದಿಗೆ ಆಟವಾಡಲು ಅಥವಾ ಸಮುದ್ರಕ್ಕೆ ಇಳಿಯಲು ಅವಕಾಶ ಇಲ್ಲದಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.

ಮೂರು ತಿಂಗಳ ಮಳೆಗಾಲದ ಅವಧಿ ಮುಗಿದ ಬಳಿಕ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳಿದ ನಂತರ ಮತ್ತೆ ಪ್ರವಾಸಿಗರಿಗೆ ಸಮುದ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲಿಯವರೆಗೆ ಸುರಕ್ಷತಾ ದೃಷ್ಟಿಯಿಂದ ವಿಧಿಸಲಾಗಿರುವ ನಿರ್ಬಂಧವನ್ನು ಪಾಲಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ.

ಪ್ರವಾಸಿಗರ ಜೀವ ರಕ್ಷಣೆ ಮತ್ತು ಸುರಕ್ಷತೆಯೇ ಮೊದಲ ಆದ್ಯತೆ ಎಂಬ ಉದ್ದೇಶದಿಂದ ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದ್ದು, ಮಳೆಗಾಲದಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!