ಮಂಗಳೂರು, ಜೂ.10: ಕೃಷಿ ಇಲಾಖೆಯ ಆತ್ಮ (ATMA) ಯೋಜನೆಯಡಿ 2026-27ನೇ ಸಾಲಿನ ಜಿಲ್ಲಾ ಹಾಗೂ ತಾಲೂಕು ಮಟ್ಟದ ಶ್ರೇಷ್ಠ ಕೃಷಿಕ ಪ್ರಶಸ್ತಿಗಾಗಿ ಆಸಕ್ತ ಮತ್ತು ಅರ್ಹ ರೈತರು ಹಾಗೂ ರೈತ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕೃಷಿಯಲ್ಲಿ ಸಾಧನೆ ಮಾಡಿರುವ ರೈತರನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರಶಸ್ತಿ ನೀಡಲಾಗುತ್ತಿದ್ದು, ಅರ್ಜಿದಾರರು ತಾವು ನಿರ್ವಹಿಸುತ್ತಿರುವ ಒಂದೇ ಒಂದು ಚಟುವಟಿಕೆಯಡಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಶಸ್ತಿಗಾಗಿ ಸಮಗ್ರ ಕೃಷಿ ಪದ್ಧತಿ, ಸಮಗ್ರ ನೀರು ನಿರ್ವಹಣೆ, ಸಾವಯವ ಕೃಷಿ ಅಭಿವೃದ್ಧಿ, ವೈಜ್ಞಾನಿಕ ಕೃಷಿ ಯಂತ್ರೋಪಕರಣಗಳ ಬಳಕೆ, ತೋಟಗಾರಿಕೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಮೀನುಗಾರಿಕೆ, ರೇಷ್ಮೆ ಬೇಸಾಯ, ಹೈಟೆಕ್ ತಂತ್ರಜ್ಞಾನ ಅಳವಡಿಕೆ, ಕೃಷಿ ಸಂಸ್ಕರಣೆ, ಅರಣ್ಯ ಕೃಷಿ ಹಾಗೂ ಆಡು, ಕುರಿ, ಮೊಲ ಸಾಕಾಣಿಕೆ ಸೇರಿದಂತೆ ವಿವಿಧ ವಿಭಾಗಗಳನ್ನು ಗುರುತಿಸಲಾಗಿದೆ.
ಅರ್ಜಿಯೊಂದಿಗೆ ಸಂಬಂಧಿತ ಚಟುವಟಿಕೆಗಳ ದಾಖಲೆಗಳು, ಛಾಯಾಚಿತ್ರಗಳು, ವೆಚ್ಚ-ಆದಾಯ ವಿವರಗಳು, ಪತ್ರಿಕಾ ಪ್ರಕಟಣೆಗಳು ಹಾಗೂ ಇತರ ಪೂರಕ ದಾಖಲೆಗಳ ಪ್ರತಿಗಳನ್ನು ಲಗತ್ತಿಸಬೇಕು. ಅರ್ಜಿದಾರರು ಅಳವಡಿಸಿಕೊಂಡಿರುವ ತಂತ್ರಜ್ಞಾನ ಅಥವಾ ಕೃಷಿ ವಿಧಾನವು ಇತರ ರೈತರಿಗೆ ಮಾದರಿಯಾಗುವಂತಿದ್ದು, ಪ್ರಸ್ತುತ ಕೃಷಿ ಪರಿಸ್ಥಿತಿಗೆ ಪೂರಕವಾಗಿರಬೇಕು ಎಂದು ಕೃಷಿ ಇಲಾಖೆ ತಿಳಿಸಿದೆ.
ಕಳೆದ ಎರಡು ವರ್ಷಗಳಲ್ಲಿ ತಾಲೂಕು ಅಥವಾ ಜಿಲ್ಲಾ ಮಟ್ಟದ ಪ್ರಶಸ್ತಿ ಪಡೆದಿರುವ ರೈತರು ಮುಂದಿನ ಹಂತದ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ, ಒಮ್ಮೆ ರಾಜ್ಯಮಟ್ಟದ ಶ್ರೇಷ್ಠ ಕೃಷಿಕ ಅಥವಾ ಕೃಷಿ ಪಂಡಿತ ಪ್ರಶಸ್ತಿ ಪಡೆದವರು ಮತ್ತೆ ಯಾವುದೇ ಹಂತದ ಪ್ರಶಸ್ತಿಗೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ.
ಅರ್ಜಿ ಸಲ್ಲಿಸಲು ಜುಲೈ 7 ಕೊನೆಯ ದಿನವಾಗಿದ್ದು, ಅರ್ಜಿ ನಮೂನೆಗಳನ್ನು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಸಂಬಂಧಿತ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.