ಚಿಕ್ಕಮಗಳೂರು, ಜೂ.12: ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟು, ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೆಂಗಳೂರು ಮೂಲದ ಯೋಗೀಶ್ (25) ಎಂದು ಗುರುತಿಸಲಾಗಿದೆ. ಈತ ತರಿಕೆರೆ ತಾಲೂಕಿನ ಲಕ್ಕವಳ್ಳಿ ಗ್ರಾಮದ ಯುವತಿಯ ಅಶ್ಲೀಲ ಫೋಟೋಗಳನ್ನು ಆಕೆಯ ತಾಯಿಗೆ ಕಳುಹಿಸಿ ಹಣಕ್ಕಾಗಿ ಬೆದರಿಕೆ ಹಾಕಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆರೋಪಿ ರಾತ್ರಿ ವೇಳೆ ಮಹಿಳೆಗೆ ಕರೆ ಮಾಡಿ ಅಶ್ಲೀಲ ಫೋಟೋಗಳನ್ನು ತೋರಿಸಿ ಹಣ ನೀಡುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ. ಹಲವು ದಿನಗಳ ಕಾಲ ನಡೆದ ಈ ಕಿರುಕುಳದಿಂದ ಮಹಿಳೆ ಮಾನಸಿಕವಾಗಿ ನೊಂದಿದ್ದು, ಬಳಿಕ ಧೈರ್ಯ ಮಾಡಿ ಚಿಕ್ಕಮಗಳೂರು ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದರು. ತಾಂತ್ರಿಕ ಮಾಹಿತಿ ಹಾಗೂ ದೂರವಾಣಿ ಕರೆಗಳ ವಿವರಗಳನ್ನು ಪರಿಶೀಲಿಸಿ ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.
ಆರೋಪಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಿ ಇನ್ನಷ್ಟು ಮಾಹಿತಿ ಸಂಗ್ರಹಿಸಲಾಗುತ್ತಿದೆ.