ಮಿಯಪದವು, ಜೂ.12: ಕೇರಳ ಸರ್ಕಾರದ ಉಚಿತ ಬಸ್ ಸೇವೆ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಜನರಿಗೆ ಸಮರ್ಪಕವಾಗಿ ಲಭ್ಯವಾಗುತ್ತಿಲ್ಲ ಎಂದು ಆರೋಪಿಸಿರುವ ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ, ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಸ್ಥಳೀಯ ಶಾಸಕರು ಬೇಜವಾಬ್ದಾರಿ ತೋರಿದ್ದಾರೆ ಎಂದು ಟೀಕಿಸಿದೆ.
ಮಂಡಲ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡರು, ಅಧಿಕಾರಕ್ಕೆ ಬರಲು ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಶಾಸಕರು ವಿಫಲರಾಗಿದ್ದು, ಮಂಜೇಶ್ವರ ಜನತೆಗೆ ಮತ್ತೊಮ್ಮೆ ನಿರಾಸೆ ಮೂಡಿಸಿದ್ದಾರೆ ಎಂದು ಆರೋಪಿಸಿದರು.
ಪ್ರಾದೇಶಿಕ ಬಸ್ಗಳಲ್ಲಿ ಮಾತ್ರ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗಿದ್ದು, ಕಾಸರಗೋಡು–ಮಂಗಳೂರು ನಡುವಿನ ಅಂತಾರಾಜ್ಯ ಬಸ್ಗಳಿಗೆ ಈ ಸೌಲಭ್ಯ ಅನ್ವಯಿಸದಿರುವುದನ್ನು ಬಿಜೆಪಿ ಪ್ರಶ್ನಿಸಿದೆ. ಇದೇ ರೀತಿ ಸರ್ಕಾರದ ಉದ್ದೇಶಿತ ಸ್ಪೀಡ್ ರೈಲು ಯೋಜನೆಯೂ ಕಾಸರಗೋಡುವರೆಗೆ ಮಾತ್ರ ಸೀಮಿತವಾಗಿರುವುದರಿಂದ ಮಂಜೇಶ್ವರ ಭಾಗವನ್ನು ಕಡೆಗಣಿಸಲಾಗುತ್ತಿದೆ ಎಂದು ಆರೋಪಿಸಿತು.
ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಮಂಜೇಶ್ವರ ಪ್ರದೇಶವನ್ನು ಕೇರಳ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ದೂರಿದರು.
ಸಭೆಯಲ್ಲಿ ಈ ತಿಂಗಳ 27 ಮತ್ತು 28ರಂದು ನಡೆಯಲಿರುವ ಬಿಜೆಪಿ ಮಂಜೇಶ್ವರ ಮಂಡಲ ಪ್ರಶಿಕ್ಷಣ ವರ್ಗವನ್ನು ಯಶಸ್ವಿಗೊಳಿಸುವ ಕುರಿತು ತೀರ್ಮಾನ ಕೈಗೊಳ್ಳಲಾಯಿತು.
ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ್ ಬಿ.ಎಂ. ಅಧ್ಯಕ್ಷತೆ ವಹಿಸಿದ್ದರು. ಮಂಡಲ ಪ್ರಧಾನ ಕಾರ್ಯದರ್ಶಿ ಮುರಳೀಧರ ಯಾದವ್ ಮಾಹಿತಿ ನೀಡಿದರು.
ಜಿಲ್ಲಾ ಅಧ್ಯಕ್ಷೆ ಅಶ್ವಿನಿ ಎಂ.ಎಲ್., ಮುಖಂಡರಾದ ಎ.ಕೆ. ಕಯ್ಯರ್, ಲೋಕೇಶ್ ನೋಂಡ, ಯಾದವ ಬಡಾಜೆ, ಭಾಸ್ಕರ್ ನಾಯ್ಕ್ ಪೊಯ್ಯೆ, ತುಳಸಿ ಕುಮಾರಿ, ಶಾಲಿನಿ ಶೆಟ್ಟಿ, ಸುಬ್ರಮಣ್ಯ ಭಟ್, ಕೃಷ್ಣ ಬೇಜ್ಜ, ಗಣೇಶ್ ಪ್ರಸಾದ್ ಚೇರಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೆ.ವಿ. ಭಟ್ ಸ್ವಾಗತಿಸಿ, ಚಂದ್ರಹಾಸ ಶೆಟ್ಟಿ ಬೇಜ್ಜ ವಂದಿಸಿದರು.