ಮಂಗಳೂರು, ಜೂ.25: ಕಳೆದ 17 ವರ್ಷಗಳಿಂದ ತುಳು ರಂಗಭೂಮಿಯಲ್ಲಿ ವಿಶಿಷ್ಟ ಛಾಪು ಮೂಡಿಸಿರುವ ವಿಧಾತ್ರಿ ಕಲಾವಿದೆರ್ ಕುಡ್ಲ (ರಿ.) ಸಂಸ್ಥೆಯ ವತಿಯಿಂದ ‘ವಿಧಾತ್ರಿ ಸಂಭ್ರಮ-2026’ ಕಾರ್ಯಕ್ರಮವು ಜೂನ್ 28ರಂದು ಸಂಜೆ 4.30ಕ್ಕೆ ನಗರದ ಪುರಭವನ (ಟೌನ್ ಹಾಲ್)ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಚಿದಾನಂದ ಅಡ್ಯಪಾಡಿ ಸಾರಥ್ಯದಲ್ಲಿ, ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದ ಹಾಗೂ ಭರತ್ ಎಸ್. ಕರ್ಕೇರ ರಚನೆಯ ತುಳು-ಕನ್ನಡ ದ್ವಿಭಾಷಾ ನಾಟಕ ‘ಜೈ ಹನುಮಾನ್’ ಪ್ರದರ್ಶನಗೊಳ್ಳಲಿದೆ.
ಈ ಕುರಿತು ಮಾಹಿತಿ ನೀಡಿದ ತುಳು ರಂಗಭೂಮಿ ಕಲಾವಿದ ಚಿದಾನಂದ ಅಡ್ಯಪಾಡಿ, ವಿಧಾತ್ರಿ ಕಲಾವಿದೆರ್ ಕುಡ್ಲ ತಂಡವು ಕಳೆದ 17 ವರ್ಷಗಳಿಂದ ರಾಜ್ಯದ ವಿವಿಧ ನಗರಗಳು ಹಾಗೂ ಮುಂಬೈ ಸೇರಿದಂತೆ ಹಲವೆಡೆ ಯಶಸ್ವಿ ನಾಟಕ ಪ್ರದರ್ಶನಗಳನ್ನು ನೀಡಿದೆ ಎಂದರು.
ಐತಿಹಾಸಿಕ, ಜಾನಪದ ಹಾಗೂ ಹಾಸ್ಯಮಯ ನಾಟಕಗಳ ಮೂಲಕ ಜನಮನ್ನಣೆ ಗಳಿಸಿರುವ ತಂಡವು ಈ ಬಾರಿ ಅದ್ಧೂರಿ ರಂಗ ವಿನ್ಯಾಸ ಮತ್ತು ಸಿನಿಮೀಯ ಶೈಲಿಯ ನಿರೂಪಣೆಯೊಂದಿಗೆ ‘ಜೈ ಹನುಮಾನ್’ ನಾಟಕವನ್ನು ಪ್ರೇಕ್ಷಕರ ಮುಂದಿಡಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ‘ವಿಧಾತ್ರಿ ಸಂಭ್ರಮ-2026’ ಪ್ರಶಸ್ತಿ ಪ್ರದಾನ ಸಮಾರಂಭವೂ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ನಾಟಕಕ್ಕೆ ಉಚಿತ ಪ್ರವೇಶವಿದೆ ಎಂದು ಆಯೋಜಕರು ತಿಳಿಸಿದ್ದಾರೆ.