ಮಂಜೇಶ್ವರ, ಜೂ.12: ಸುಮಾರು ಎರಡು ದಶಕಗಳ ಕಾಲ ಕಾನೂನಿನ ಕಣ್ಣಿಗೆ ಮಣ್ಣೆರಚಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಂಬಳೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹೊಸಂಗಡಿ ನಿವಾಸಿ ಪ್ರಶಾಂತ್ (44) ಬಂಧಿತ ಆರೋಪಿ.
2006ರ ಅಬಕಾರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಶಾಂತ್, ಜಾಮೀನು ಪಡೆದು ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಕರ್ನಾಟಕಕ್ಕೆ ಪರಾರಿಯಾಗಿದ್ದನು. ಈ ಹಿನ್ನೆಲೆಯಲ್ಲಿ 2010ರಲ್ಲಿ ನ್ಯಾಯಾಲಯ ಆತನನ್ನು ಘೋಷಿತ ಆರೋಪಿಯಾಗಿ ಘೋಷಿಸಿತ್ತು.
ಖಚಿತ ಮಾಹಿತಿ ಆಧರಿಸಿ ಕುಂಬಳೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಬೈಜು ಕೆ. ಜೋಸ್ ನೇತೃತ್ವದಲ್ಲಿ ಚಂದ್ರನ್, ಕಿಶೋರ್ ಹಾಗೂ ಉದಯನ್ ಅವರ ತಂಡ ತೊಕ್ಕೊಟ್ಟಿನಲ್ಲಿ ಬಲೆ ಬೀಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಪ್ರಕ್ರಿಯೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.