ಮಂಗಳೂರು, ಜೂ.13: ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಮುಲ್ಕಿಯ ಬಪ್ಪನಾಡು ಪ್ರವೇಶ ದ್ವಾರದ ಸಮೀಪವಿದ್ದ ವಿಜಯಾ ಬ್ಯಾಂಕಿನ ಆಧುನಿಕ ಶಿಲ್ಪಿ ದಿವಂಗತ ಸುಂದರ್ ರಾಮ್ ಶೆಟ್ಟಿಯವರ ಸಮಾಧಿಯನ್ನು ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ತೆರವುಗೊಳಿಸಿರುವ ಕ್ರಮವನ್ನು ಸುಂದರ್ ರಾಮ್ ಶೆಟ್ಟಿ ಅಭಿಮಾನಿ ಬಳಗ ತೀವ್ರವಾಗಿ ಖಂಡಿಸಿದೆ.
ಕುಟುಂಬ ಸದಸ್ಯರು, ಅಭಿಮಾನಿಗಳು ಹಾಗೂ ಸ್ಥಳೀಯ ಸಾರ್ವಜನಿಕರೊಂದಿಗೆ ಯಾವುದೇ ಸಮಾಲೋಚನೆ ನಡೆಸದೆ ಸಮಾಧಿಯನ್ನು ಧ್ವಂಸಗೊಳಿಸಿರುವುದು ನೋವುಂಟುಮಾಡಿದೆ ಎಂದು ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಜಯಾ ಬ್ಯಾಂಕನ್ನು ಕರಾವಳಿ ಪ್ರದೇಶದಿಂದ ರಾಷ್ಟ್ರಮಟ್ಟಕ್ಕೆ ಬೆಳೆಸುವಲ್ಲಿ ಸುಂದರ್ ರಾಮ್ ಶೆಟ್ಟಿಯವರ ಕೊಡುಗೆ ಅಪಾರವಾಗಿದೆ. 1963ರಿಂದ 1968ರ ಅವಧಿಯಲ್ಲಿ ಒಂಬತ್ತು ಸಣ್ಣ ಬ್ಯಾಂಕುಗಳನ್ನು ವಿಜಯಾ ಬ್ಯಾಂಕ್ಗೆ ವಿಲೀನಗೊಳಿಸುವ ಮೂಲಕ ಬ್ಯಾಂಕಿನ ವಿಸ್ತರಣೆಗೆ ಅವರು ಕಾರಣರಾಗಿದ್ದರು. ಗ್ರಾಮೀಣ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಸೇವೆಗಳನ್ನು ವಿಸ್ತರಿಸುವ ಜೊತೆಗೆ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಅನೇಕ ಕುಟುಂಬಗಳ ಆರ್ಥಿಕ ಅಭಿವೃದ್ಧಿಗೆ ನೆರವಾಗಿದ್ದರು ಎಂದು ಅವರು ಹೇಳಿದರು.
1980ರಲ್ಲಿ ವಿಜಯಾ ಬ್ಯಾಂಕ್ ರಾಷ್ಟ್ರೀಕರಣಗೊಂಡಾಗ 571 ಶಾಖೆಗಳು, 10 ಸಾವಿರಕ್ಕೂ ಅಧಿಕ ಸಿಬ್ಬಂದಿ ಹಾಗೂ ₹605 ಕೋಟಿಗೂ ಹೆಚ್ಚಿನ ವ್ಯವಹಾರ ಹೊಂದಿದ್ದು, ಅದರ ಹಿಂದೆ ಸುಂದರ್ ರಾಮ್ ಶೆಟ್ಟಿಯವರ ದೂರದೃಷ್ಟಿಯ ನಾಯಕತ್ವವಿತ್ತು ಎಂದು ಅಭಿಮಾನಿ ಬಳಗ ಸ್ಮರಿಸಿತು.
ಸುಂದರ್ ರಾಮ್ ಶೆಟ್ಟಿಯವರು ಕೇವಲ ಬ್ಯಾಂಕರ್ ಆಗಿರದೆ, ಶಿಕ್ಷಣ ಪ್ರೇಮಿ, ಸಮಾಜ ಸೇವಕ ಹಾಗೂ ಉದ್ಯೋಗ ಸೃಷ್ಟಿಕರ್ತರಾಗಿದ್ದರು. ಆದ್ದರಿಂದ ಅವರ ಸಮಾಧಿಯನ್ನು ಮರುಸ್ಥಾಪಿಸಿ, ಅವರ ಸ್ಮರಣಾರ್ಥವಾಗಿ ಮುಲ್ಕಿ ಅಥವಾ ಬಪ್ಪನಾಡು ವ್ಯಾಪ್ತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಲಾಯಿತು.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಸುದ್ದಿಗೋಷ್ಠಿಯಲ್ಲಿ ನವೀನ್ ರೈ, ಬಾಲಕೃಷ್ಣ ರೈ ಹಾಗೂ ನಿವೃತ್ತ ವಿಜಯಾ ಬ್ಯಾಂಕ್ ಅಧಿಕಾರಿ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.