ಬಾಲಕಿ ಆರ್ನಿಕಾ ಸಾವು: ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಆರೋಗ್ಯ ಸಚಿವರು, ಶಾಸಕರಿಗೆ ದೂರು ನೀಡಲು ಕುಟುಂಬದ ನಿರ್ಧಾರ

ಬಂಟ್ವಾಳ: ಅಲ್ಪಕಾಲದ ಅಸೌಖ್ಯದಿಂದ ಜೂನ್ 16ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಐದು ವರ್ಷದ ಬಾಲಕಿ ಆರ್ನಿಕಾ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ವೈದ್ಯಕೀಯ ನಿರ್ಲಕ್ಷ್ಯ ಮತ್ತು ಚಿಕಿತ್ಸಾ ವ್ಯವಸ್ಥೆಯ ಲೋಪಗಳ ಬಗ್ಗೆ ಬಾಲಕಿಯ ತಾಯಿ ಛಾಯಾ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಆರೋಗ್ಯ ಸಚಿವರು ಹಾಗೂ ಸ್ಥಳೀಯ ಶಾಸಕರಿಗೆ ಲಿಖಿತ ದೂರು ಸಲ್ಲಿಸುವುದಾಗಿ ತಿಳಿಸಿದ್ದಾರೆ. ಇಂತಹ ಘಟನೆ ಮತ್ತಾವ ಕುಟುಂಬಕ್ಕೂ ಮರುಕಳಿಸಬಾರದು ಎಂಬ ಉದ್ದೇಶದಿಂದ ವೈದ್ಯಕೀಯ ವ್ಯವಸ್ಥೆಯಲ್ಲಿ ಅಗತ್ಯ ಸುಧಾರಣೆಗಳನ್ನು ಆಗ್ರಹಿಸುವುದಾಗಿ ಅವರು ಹೇಳಿದ್ದಾರೆ.

ಛಾಯಾ ಅವರ ಪ್ರಕಾರ, ಆರ್ನಿಕಾ ಜೂನ್ 13ರವರೆಗೆ ಆರೋಗ್ಯವಾಗಿದ್ದು, ಬಳಿಕ ಜ್ವರ, ತಲೆನೋವು ಮತ್ತು ವಾಂತಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯಕೀಯ ಸಲಹೆ ಪಡೆದು ಚಿಕಿತ್ಸೆ ಆರಂಭಿಸಲಾಗಿತ್ತು. ಆದರೆ ಆರೋಗ್ಯದಲ್ಲಿ ಸುಧಾರಣೆ ಕಾಣದ ಕಾರಣ ಜೂನ್ 15ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ನಡೆಸಿದ ರಕ್ತ ಪರೀಕ್ಷೆಯಲ್ಲಿ ಕೆಲವು ಅಂಶಗಳು ಅಸಹಜವಾಗಿದ್ದರೂ, ಚಿಕಿತ್ಸೆ ಮುಖ್ಯವಾಗಿ ಐವಿ ಫ್ಲೂಯಿಡ್ಸ್ ಮತ್ತು ಜ್ವರ-ವಾಂತಿ ನಿಯಂತ್ರಣ ಔಷಧಿಗಳಿಗೆ ಸೀಮಿತವಾಗಿತ್ತು ಎಂದು ಅವರು ಆರೋಪಿಸಿದ್ದಾರೆ. ನಂತರ ಬಾಲಕಿಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟು, ಮೆನಿಂಜೈಟಿಸ್ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.

ಆರಂಭಿಕ ಹಂತದಲ್ಲಿಯೇ ಹೆಚ್ಚಿನ ವೈದ್ಯಕೀಯ ಪರೀಕ್ಷೆಗಳು ಹಾಗೂ ಸೂಕ್ತ ಆಂಟಿಬಯೋಟಿಕ್ ಚಿಕಿತ್ಸೆ ನೀಡಿದ್ದರೆ ಬಾಲಕಿ ಬದುಕುಳಿಯುವ ಸಾಧ್ಯತೆ ಇತ್ತೆಂದು ಕುಟುಂಬದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶ ಹೊರಬರಬೇಕೆಂದು ಕುಟುಂಬ ಸದಸ್ಯರು ಆಗ್ರಹಿಸಿದ್ದಾರೆ. ಜೊತೆಗೆ ಸಾಮಾಜಿಕ ಜಾಲತಾಣಗಳು ಹಾಗೂ ಮಾಧ್ಯಮಗಳು ಪರಿಶೀಲಿಸದ ಮಾಹಿತಿಯನ್ನು ಪ್ರಸಾರ ಮಾಡದಂತೆ ಮನವಿ ಮಾಡಿದ್ದಾರೆ.

ಆರ್ನಿಕಾ ಅವರ ಸಾವಿನ ಕುರಿತು ಮಾಡಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಆಸ್ಪತ್ರೆ ಅಥವಾ ಸಂಬಂಧಿತ ವೈದ್ಯರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ.

SHARE
Loading spinner

Leave a Reply

Your email address will not be published. Required fields are marked *

error: Content is protected !!