ಹೆಣ್ಣುಮಕ್ಕಳ ಸುರಕ್ಷತೆ, ಆರೋಗ್ಯ ಹಾಗೂ ಕಾನೂನು ಅರಿವಿಗೆ ವಿಶೇಷ ಒತ್ತು

ಮಂಗಳೂರು, ಜೂನ್ 24: ಇಂದಿನ ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆ ಹಾಗೂ ಮಾನಸಿಕ ಸ್ಥೈರ್ಯಕ್ಕೆ ಸಂಬಂಧಿಸಿದ ಸವಾಲುಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಹಾಗೂ ಲೋಬೋ ಫೌಂಡೇಶನ್ (ರಿ) ಜಂಟಿ ಆಶ್ರಯದಲ್ಲಿ ಜುಲೈ ತಿಂಗಳ ಪೂರ್ತಿ ಮಂಗಳೂರಿನ ವಿವಿಧ ಹೋಬಳಿ ಮಟ್ಟದ ಶಾಲೆಗಳಲ್ಲಿ ‘ಬಾಲಿಕಾ ಜಾಗೃತಿ ಅಭಿಯಾನ’ ಹಮ್ಮಿಕೊಳ್ಳಲಾಗಿದೆ ಎಂದು ಪ್ರಚಲಿತ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಹನಿಷ ಸವಾದ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಸೈಬರ್ ಅಪರಾಧಗಳು, ಪ್ರೀತಿ-ಪ್ರೇಮದ ಹೆಸರಿನಲ್ಲಿ ನಡೆಯುವ ವಂಚನೆಗಳು, ಪರೀಕ್ಷಾ ಒತ್ತಡದಿಂದ ಉಂಟಾಗುವ ಆತ್ಮಹತ್ಯೆಗಳು ಹಾಗೂ ವಿವಿಧ ರೀತಿಯ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವ ಅಗತ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಅಭಿಯಾನದ ಮೂಲಕ ಹೆಣ್ಣುಮಕ್ಕಳಿಗೆ ಆರೋಗ್ಯ, ಶಿಕ್ಷಣ, ಕಾನೂನು ಅರಿವು, ವ್ಯಕ್ತಿತ್ವ ವಿಕಾಸ, ಆತ್ಮವಿಶ್ವಾಸ, ಸೈಬರ್ ಸುರಕ್ಷತೆ ಹಾಗೂ ಜೀವನ ಕೌಶಲ್ಯಗಳ ಕುರಿತು ಸಮಗ್ರ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಪ್ರಸಿದ್ಧ ವೈದ್ಯರು, ಹಿರಿಯ ನ್ಯಾಯವಾದಿಗಳು ಹಾಗೂ ಅನುಭವಿ ಶಿಕ್ಷಣ ತಜ್ಞರು ವಿದ್ಯಾರ್ಥಿನಿಯರೊಂದಿಗೆ ನೇರ ಸಂವಾದ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು.

ಜಾಗೃತ ಹೆಣ್ಣುಮಗು – ಸುರಕ್ಷಿತ ಸಮಾಜದ ಅಡಿಪಾಯ

‘ಜಾಗೃತ ಹೆಣ್ಣುಮಗು – ಸುರಕ್ಷಿತ ಸಮಾಜದ ಅಡಿಪಾಯ’ ಎಂಬ ಧ್ಯೇಯವಾಕ್ಯದೊಂದಿಗೆ ನಡೆಯುವ ಈ ಅಭಿಯಾನವು ವಿದ್ಯಾರ್ಥಿನಿಯರಲ್ಲಿ ಆತ್ಮವಿಶ್ವಾಸ ಬೆಳೆಸುವುದರ ಜೊತೆಗೆ, ಉತ್ತಮ ನಾಗರಿಕರಾಗಿ ಬೆಳೆಯಲು ಅಗತ್ಯವಾದ ಕಾನೂನು ಹಾಗೂ ಸಾಮಾಜಿಕ ಅರಿವು ಮೂಡಿಸುವ ಮಹತ್ವದ ಪ್ರಯತ್ನವಾಗಿದೆ ಎಂದು ಅವರು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಮಾನಸ ಹೆಗ್ಡೆ, ಲೋಬೋ ಫೌಂಡೇಶನ್ (ರಿ) ಸಂಸ್ಥಾಪಕ ಜಾನ್ ವಿಲ್ಸನ್ ಲೋಬೋ, ಪ್ರಚಲಿತ ಚಾರಿಟೇಬಲ್ ಟ್ರಸ್ಟ್ (ರಿ) ಸಂಸ್ಥಾಪಕ ಅಧ್ಯಕ್ಷ ಡಾ. ಸಂಶದ್ ಕುಂಜತ್ತಬೈಲ್ ಹಾಗೂ ಸಮಾಜಕಾರ್ಯ ಮತ್ತು ಶಿಕ್ಷಣ ತಜ್ಞೆ ಡಾ. ಅನುರಾಧ ಶೆಟ್ಟಿ ಉಪಸ್ಥಿತರಿದ್ದರು

SHARE
Loading spinner

Leave a Reply

Your email address will not be published. Required fields are marked *

error: Content is protected !!