ಚುನಾವಣಾ ಆಯೋಗದ ಅಧಿಕಾರ ದುರ್ಬಳಕೆಗೆ ಶಾಹಿದ್ ತೆಕ್ಕಿಲ್ ತೀವ್ರ ಆಕ್ರೋಶ

ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ದರ್ಜೆ) ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಡವಳಿಕೆ ಹಾಗೂ ಅಧಿಕಾರ ದುರ್ಬಳಕೆಯ ವಿರುದ್ಧ ವಾಗ್ದಾಳಿ ನಡೆಸಿದ ಅವರು, “ಚುನಾವಣಾ ಆಯೋಗವು ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಬದಲು ಬಿಜೆಪಿ ಮತ್ತು ಆರೆಸ್ಸೆಸ್‌ನ ಕೈಗೊಂಬೆಯಂತೆ ವರ್ತಿಸುತ್ತಿದೆ. ಒಂದೇ ನಾಣ್ಯದ ಎರಡು ಮುಖಗಳಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಕಾರ್ಯಾಚರಿಸುತ್ತಿವೆ” ಎಂದು ನೇರ ಆರೋಪ ಮಾಡಿದ್ದಾರೆ.
“2019ರಲ್ಲಿ ಕೇಂದ್ರ ಗೃಹ ಸಚಿವಾಲಯದ ಜಮ್ಮು-ಕಾಶ್ಮೀರ ವಿಭಾಗದ ಜಂಟಿ ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್, 370ನೇ ವಿಧಿ ರದ್ಧತಿ ಮತ್ತು ‘ಜಮ್ಮು-ಕಾಶ್ಮೀರ ಪುನರ್‌ವಿಂಗಡಣಾ ಕಾಯ್ದೆ 2019’ರ ಕರಡು ರಚನೆಯಲ್ಲಿ ಅಮಿತ್ ಶಾ ಅವರ ಜೊತೆಗೂಡಿ ಪ್ರಮುಖ ಪಾತ್ರ ವಹಿಸಿದ್ದರು.

ಆ ಬಳಿಕ ಚುನಾವಣಾ ಆಯೋಗಕ್ಕೆ ಬಂದ ಅವರು, ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ ಮತ್ತು ಕ್ಷೇತ್ರ ಪುನರ್‌ವಿಂಗಡಣೆ ಹೆಸರಿನಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ವ್ಯವಸ್ಥಿತವಾಗಿ ಒಡೆದು, ಮುಸ್ಲಿಮರ ಮತಗಳನ್ನು ವಿಭಜಿಸಿ ಬಿಜೆಪಿಗೆ ಚುನಾವಣಾ ಲಾಭ ಮಾಡಿಕೊಡುವ ಕೆಲಸ ಮಾಡಿದ್ದಾರೆ. ಕೇರಳ ಪಿಡಬ್ಲ್ಯುಡಿ ಇಲಾಖೆಯಲ್ಲಿದ್ದಾಗಲೂ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಎದುರಿಸಿದ್ದ ಇಂತಹ ಅಧಿಕಾರಿಗಳನ್ನು ಪ್ರಮುಖ ಹುದ್ದೆಗಳಿಗೆ ತಂದು ಕೂರಿಸಿರುವ ಹಿಂದಿನ ಉದ್ದೇಶವೇ ಚುನಾವಣೆಯಲ್ಲಿ ಅಕ್ರಮವಾಗಿ ಬಿಜೆಪಿಗೆ ಲಾಭ ಮಾಡಿಕೊಡುವುದಾಗಿದೆ. ಪ್ರಜಾಪ್ರಭುತ್ವದ ಬೆನ್ನೆಲುಬಾಗಿರುವ ಮತದಾನದ ಹಕ್ಕನ್ನೇ ಕಸಿದುಕೊಳ್ಳುವ ವ್ಯವಸ್ಥಿತ ಹುನ್ನಾರ ನಡೆಯುತ್ತಿದೆ” ಎಂದು ಅವರು ಟೀಕಿಸಿದ್ದಾರೆ.

ದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ಸುರಕ್ಷತೆ ಸಂಪೂರ್ಣವಾಗಿ ಹದಗೆಟ್ಟಿದೆ ಎಂದಿರುವ ಶಾಹಿದ್ ತೆಕ್ಕಿಲ್, “ದೇಶದ ಸಂವಿಧಾನ ಮತ್ತು ಜನರ ಪರವಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಪೊಲೀಸರ ಮೂಲಕ ತಡೆದು ವಶಕ್ಕೆ ಪಡೆದಿರುವುದು ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆ ಹಾಗೂ ಸಂಪೂರ್ಣ ವೈಫಲ್ಯಕ್ಕೆ ನಿದರ್ಶನ. ಜನರ ಸಂಕಷ್ಟಗಳಿಗೆ ಧ್ವನಿಯಾಗುತ್ತಿರುವ ಕಾಂಗ್ರೆಸ್ ನಾಯಕರ ಹೋರಾಟವನ್ನು ಹತ್ತಿಕ್ಕಲು ಬಿಜೆಪಿ ಸರ್ಕಾರ ತನಿಖಾ ಸಂಸ್ಥೆಗಳು ಮತ್ತು ಪೊಲೀಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಆದರೆ ರಾಹುಲ್ ಗಾಂಧಿಯವರು ಜನರ ಪರವಾದ ಹೋರಾಟದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ; ಸಂವಿಧಾನ ರಕ್ಷಣೆಯ ಈ ಹೋರಾಟವನ್ನು ದೇಶಾದ್ಯಂತ ಇನ್ನಷ್ಟು ತೀವ್ರಗೊಳಿಸಲಾಗುವುದು” ಎಂದು ಎಚ್ಚರಿಸಿದ್ದಾರೆ.
ಕೇಂದ್ರದ ಈ ಅಸಂವಿಧಾನಿಕ ನಡೆಯ ವಿರುದ್ಧ ಕಾಂಗ್ರೆಸ್ ಪಕ್ಷ ಹಾಗೂ ಪ್ರಜ್ಞಾವಂತ ಜನತೆ ಬೀದಿಗಿಳಿದು ಹೋರಾಟ ಮುಂದುವರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!