ಮಂಡ್ಯ: ನಿನ್ನೆ ಮಳವಳ್ಳಿ ತಾಲೂಕಿನ ಮುತತ್ತಿ ಸಮೀಪದ ಕಾವೇರಿ ನದಿಯಲ್ಲಿ ಸಂಭವಿಸಿದ ಹೃದಯವಿದ್ರಾವಕ ದುರಂತದಲ್ಲಿ ಒಂದೇ ಕುಟುಂಬದ ಐವರು ಜಲಸಮಾಧಿಯಾಗಿದ್ದಾರೆ.
ಘಟನೆಯ ಮುನ್ನ ನದಿಯಲ್ಲಿ ಸ್ನಾನ ಮಾಡುತ್ತಾ ಆಟವಾಡುತ್ತಿದ್ದ ಕುಟುಂಬ ಸದಸ್ಯರ ಕೊನೆಯ ಕ್ಷಣಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಕುಟುಂಬದ ಒಬ್ಬ ಸದಸ್ಯರು ನೀರಿನಲ್ಲಿ ಆಟವಾಡುತ್ತಿದ್ದ ನಾಲ್ವರಿಗೆ ತಮಾಷೆಯಾಗಿ “ಹ್ಯಾಪಿ ಜರ್ನಿ” ಎಂದು ಹೇಳಿರುವುದು ಕೇಳಿಬಂದಿದೆ.
ವಿಧಿಯ ವಿಪರ್ಯಾಸವೆಂದರೆ, ಆ ಮಾತುಗಳೇ ಅವರ ಬದುಕಿನ ಕೊನೆಯ ಸಂತಸದ ಕ್ಷಣಗಳಾಗಿ ಪರಿಣಮಿಸಿದ್ದು, ಕೆಲವೇ ಕ್ಷಣಗಳಲ್ಲಿ ನಡೆದ ದುರಂತ ಐವರ ಜೀವವನ್ನು ಕಸಿದುಕೊಂಡಿದೆ. ಈ ದೃಶ್ಯಗಳು ನೋಡುಗರ ಮನಕಲಕುವಂತಿದ್ದು, ಕುಟುಂಬದ ಸದಸ್ಯರು ಹಾಗೂ ಸ್ಥಳೀಯರಲ್ಲಿ ತೀವ್ರ ಶೋಕ ಮೂಡಿಸಿದೆ.
ಈ ಘಟನೆ ನದಿ ತೀರಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.