ಬಾರ್‌ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮ ಕಡ್ಡಾಯ: ನಿಯಮ ಉಲ್ಲಂಘಿಸಿದರೆ ಕ್ರಮ – ಅಬಕಾರಿ ಇಲಾಖೆ ಎಚ್ಚರಿಕೆ

ಉಡುಪಿ, ಜೂ.25: ಇತ್ತೀಚೆಗೆ ಮೈಸೂರಿನ ಪಬ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಸನ್ನದುದಾರರು ಹಾಗೂ ಬಾರ್ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಉಡುಪಿ ಅಬಕಾರಿ ಜಿಲ್ಲಾಧಿಕಾರಿ ಟಿ.ಎಂ. ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.

ಈ ಸಂಬಂಧ ಉಡುಪಿ ಅಬಕಾರಿ ಇಲಾಖೆಯ ವತಿಯಿಂದ ಜಿಲ್ಲೆಯ ಸನ್ನದುದಾರರು ಹಾಗೂ ಬಾರ್ ಮಾಲೀಕರಿಗಾಗಿ ಅಗ್ನಿ ಅವಘಡ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಮತ್ತು ಸುರಕ್ಷತಾ ಕ್ರಮಗಳ ಕುರಿತು ಕಾರ್ಯಾಗಾರವನ್ನು ಅಬಕಾರಿ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಎಲ್ಲ ಸನ್ನದು ಕಟ್ಟಡಗಳಲ್ಲಿ ಬೆಂಕಿ ನಂದಿಸುವ ಸಾಧನಗಳು ಹಾಗೂ ಅಗ್ನಿ ಅಲಾರಂ ವ್ಯವಸ್ಥೆಯನ್ನು ಕಡ್ಡಾಯವಾಗಿ ಅಳವಡಿಸಬೇಕು. ಅಲ್ಲದೆ, ಸಿಬ್ಬಂದಿಗೆ ಅಗ್ನಿ ಅವಘಡಗಳ ಸಂದರ್ಭ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಕುರಿತು ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಸನ್ನದು ಕಟ್ಟಡಗಳಲ್ಲಿನ ವಿದ್ಯುತ್ ಸಂಪರ್ಕವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ತುರ್ತು ನಿರ್ಗಮನ ದ್ವಾರಗಳಲ್ಲಿ ಯಾವುದೇ ಅಡೆತಡೆಗಳಿರಬಾರದು. ಕಟ್ಟಡ ಮತ್ತು ಅಡುಗೆಮನೆಯಲ್ಲಿ ಸಮರ್ಪಕ ಗಾಳಿ ಸಂಚಾರ ವ್ಯವಸ್ಥೆ ಕಲ್ಪಿಸಬೇಕು. ಅಗ್ನಿಶಾಮಕ ಇಲಾಖೆಯ ದೂರವಾಣಿ ಸಂಖ್ಯೆಯನ್ನು ಗ್ರಾಹಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಎಂದು ಅವರು ತಿಳಿಸಿದರು.

ಕೆಲವು ಬಾರ್‌ಗಳಲ್ಲಿ ಅನಧಿಕೃತವಾಗಿ ಮೂರನೇ ಹಾಗೂ ನಾಲ್ಕನೇ ಮಹಡಿಗಳನ್ನು ನಿರ್ಮಿಸಿ ಸೇವೆ ನೀಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂತಹ ಸ್ಥಳಗಳಲ್ಲಿ ಯಾವುದೇ ಅನಾಹುತ ಸಂಭವಿಸಿದರೆ ಸನ್ನದುದಾರರೇ ನೇರ ಹೊಣೆಗಾರರಾಗಲಿದ್ದಾರೆ. ಆದ್ದರಿಂದ ಕಾನೂನುಬದ್ಧ ಅನುಮತಿ ಪಡೆದು ನಿಯಮಾನುಸಾರ ಕಾರ್ಯನಿರ್ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.

ಅಲ್ಲದೆ, ನಿಗದಿತ ಸಮಯಕ್ಕಿಂತ ಮೊದಲು ಅಥವಾ ನಿಗದಿತ ಸಮಯ ಮೀರಿ ಬಾರ್‌ಗಳನ್ನು ತೆರೆಯಬಾರದು. ಎಲ್ಲ ಸನ್ನದುದಾರರು ಅಬಕಾರಿ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಸೂಚಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!