ಕಾಸರಗೋಡು, ಜುಲೈ 1: ಕಾಸರಗೋಡು ಕನ್ನಡ ಗ್ರಾಮದಲ್ಲಿರುವ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯವು ತನ್ನ ರಜತ ಮಹೋತ್ಸವ ವರ್ಷ (2000–2026)ವನ್ನು ಅಂಗವಾಗಿ 25 ಸರಣಿ ದತ್ತಿ ಉಪನ್ಯಾಸ ಮಾಲಿಕೆ ಹಾಗೂ ‘ಕಾಸರಗೋಡು ಸಾಹಿತ್ಯೋತ್ಸವ–ಕನ್ನಡೋತ್ಸವ’ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ಖಾಸಗಿ ನೆಲೆಯಲ್ಲಿ ಅತಿದೊಡ್ಡ ಕನ್ನಡ ಪುಸ್ತಕ ಸಂಗ್ರಹ ಹೊಂದಿರುವ ಈ ಗ್ರಂಥಾಲಯದಲ್ಲಿ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಇತಿಹಾಸಕ್ಕೆ ಸಂಬಂಧಿಸಿದ ಅಪರೂಪದ ಕೃತಿಗಳ ಸಂಗ್ರಹವಿದ್ದು, ಲೇಖಕರು, ಸಾಹಿತಿಗಳು, ಕವಿಗಳು, ಸಂಶೋಧಕರು, ಶಿಕ್ಷಣ ತಜ್ಞರು, ಮಾಧ್ಯಮದವರು ಮತ್ತು ಕಲಾವಿದರ ಅಧ್ಯಯನಕ್ಕೆ ಅಗತ್ಯವಾದ ಸಾಹಿತ್ಯ ಸಂಪನ್ಮೂಲಗಳನ್ನು ಇನ್ನಷ್ಟು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಗ್ರಂಥಾಲಯದಲ್ಲಿ ಪ್ರತಿ ತಿಂಗಳ ನಾಲ್ಕನೇ ಶನಿವಾರ ಮಧ್ಯಾಹ್ನ 3.30ರಿಂದ ಸಂಜೆ 6 ಗಂಟೆಯವರೆಗೆ ಉಪನ್ಯಾಸ, ವಿಚಾರ ಸಂಕಿರಣ, ಅಧ್ಯಯನ ಗೋಷ್ಠಿ, ಕಮ್ಮಟ, ತರಬೇತಿ ಶಿಬಿರ, ಸಂವಾದ ಹಾಗೂ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಈ ಕಾರ್ಯಕ್ರಮಗಳಿಗೆ ಕೇರಳ ಹಾಗೂ ಕರ್ನಾಟಕದ ವಿವಿಧ ಅಕಾಡೆಮಿಗಳು, ಪ್ರಾಧಿಕಾರಗಳು, ವಿಶ್ವವಿದ್ಯಾಲಯಗಳು ಹಾಗೂ ಸಂಘ-ಸಂಸ್ಥೆಗಳಿಗೆ ಉಚಿತವಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ.


ಇದರೊಂದಿಗೆ, ದೇಶ-ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ಪ್ರಕಟಿಸಿರುವ ವಿವಿಧ ಸಾಹಿತ್ಯ ಕೃತಿಗಳ ವಿಶೇಷ ಪ್ರದರ್ಶನವನ್ನು ಏರ್ಪಡಿಸುವ ಯೋಜನೆಯೂ ರೂಪಿಸಲಾಗಿದೆ. ಕಾಸರಗೋಡು ಜಿಲ್ಲೆಯ ಮೂಲದ ಲೇಖಕರು, ಸಾಹಿತಿಗಳು, ಪ್ರಕಾಶಕರು ಹಾಗೂ ಸಾಹಿತ್ಯಾಸಕ್ತರು ತಮ್ಮ ಪ್ರಕಟಿತ ಕೃತಿಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡುವಂತೆ ಮನವಿ ಮಾಡಲಾಗಿದೆ.
ಗ್ರಂಥಾಲಯದ ಅಭಿವೃದ್ಧಿಗಾಗಿ ಕಂಪ್ಯೂಟರ್ಗಳು, ಪೀಠೋಪಕರಣಗಳು, ಪುಸ್ತಕ ಕಪಾಟುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ದಾನವಾಗಿ ನೀಡುವಂತೆ ಹಾಗೂ ನಿರ್ವಹಣೆಗೆ ಆರ್ಥಿಕ ನೆರವು ನೀಡುವಂತೆ ದಾನಿಗಳು, ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳು, ದೇವಸ್ಥಾನಗಳು ಮತ್ತು ಮಠಗಳಿಗೆ ಮನವಿ ಸಲ್ಲಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಕೆ. ಪುರುಷೋತ್ತಮ ಮಾಸ್ತರ್ ಸ್ಮಾರಕ ಗ್ರಂಥಾಲಯದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರನ್ನು ಮೊಬೈಲ್ ಸಂಖ್ಯೆ 9448572016ರಲ್ಲಿ ಸಂಪರ್ಕಿಸಬಹುದಾಗಿದೆ. ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.


