ಹರಿಕಂಡಿಗೆ–ಪೆರ್ಡೂರು ಮಾರ್ಗದ ಖಾಸಗಿ ಬಸ್ನಲ್ಲಿ ಜನಸಂದಣಿ; ಹೆಚ್ಚುವರಿ ಬಸ್ ವ್ಯವಸ್ಥೆಗೆ ಸಾರ್ವಜನಿಕರ ಆಗ್ರಹ
ಉಡುಪಿ: ಜಿಲ್ಲೆಯ ಹರಿಕಂಡಿಗೆ–ಪೆರ್ಡೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ನಲ್ಲಿ ವಿದ್ಯಾರ್ಥಿಗಳು ಬಸ್ನ ಏಣಿಯಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ನಲ್ಲಿ ಅತಿಯಾದ ಜನಸಂದಣಿ ಉಂಟಾಗಿರುವುದು ಕಂಡುಬಂದಿದ್ದು, ಆಸನ ಹಾಗೂ ನಿಲ್ಲಲು ಸ್ಥಳಾವಕಾಶವೂ ಇಲ್ಲದ ಕಾರಣ ಕೆಲ ವಿದ್ಯಾರ್ಥಿಗಳು ಜೀವದ ಹಂಗು ತೊರೆದು ಏಣಿಯಲ್ಲಿ ನೇತಾಡಿಕೊಂಡೇ ಪ್ರಯಾಣಿಸುತ್ತಿರುವ ದೃಶ್ಯಗಳು ಸೆರೆಯಾಗಿವೆ. ಈ ವಿಡಿಯೋ ಹರಿಕಂಡಿಗೆ–ಪೆರ್ಡೂರು ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ.
ಘಟನೆಗೆ ಸಾರ್ವಜನಿಕರು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಶಾಲೆ ಹಾಗೂ ಕಾಲೇಜುಗಳ ಆರಂಭ ಮತ್ತು ಮುಕ್ತಾಯದ ವೇಳೆಯಲ್ಲಿ ಹೆಚ್ಚುವರಿ ಬಸ್ಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿದ್ಯಾರ್ಥಿಗಳಿಗೆ ಸುರಕ್ಷಿತ ಪ್ರಯಾಣದ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಇದೇ ವೇಳೆ, ಸಂಬಂಧಪಟ್ಟ ಸಾರಿಗೆ ಇಲಾಖೆ ಮತ್ತು ಜಾರಿ ಅಧಿಕಾರಿಗಳು ವೈರಲ್ ವಿಡಿಯೋದ ಕುರಿತು ಪರಿಶೀಲನೆ ನಡೆಸಿ, ಖಾಸಗಿ ಬಸ್ಗಳಲ್ಲಿ ಸುರಕ್ಷತಾ ನಿಯಮಗಳ ಪಾಲನೆ ಖಚಿತಪಡಿಸುವ ಜೊತೆಗೆ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯವೂ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.


