ಬಂಟ್ವಾಳ, ಜು.3: ದಲಿತ ಸಮುದಾಯದ ಬಹುಕಾಲದ ಬೇಡಿಕೆಗೆ ಸ್ಪಂದಿಸಿದ ಆಡಳಿತ, ಸಮಾಜ ಕಲ್ಯಾಣ ಇಲಾಖೆಯ ಕಚೇರಿಯನ್ನು ಅಂಬೇಡ್ಕರ್ ಭವನದ ಮೇಲಂತಸ್ತಿಗೆ ಸ್ಥಳಾಂತರಿಸಿದೆ. ಹಲವು ವರ್ಷಗಳಿಂದ ಖಾಸಗಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇಲಾಖೆಗೆ ಸರ್ಕಾರಿ ಕಟ್ಟಡದಲ್ಲಿ ಸ್ಥಳಾವಕಾಶ ದೊರೆತಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಈ ಹಿಂದೆ ಸಮಾಜ ಕಲ್ಯಾಣ ಇಲಾಖೆಯ ಕಚೇರಿ ಹಳೆಯ ತಾಲೂಕು ಪಂಚಾಯತ್ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಕಟ್ಟಡವನ್ನು ಕೆಡವಿದ ಬಳಿಕ ಇಲಾಖೆಯನ್ನು ಖಾಸಗಿ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿತ್ತು. ಇಲಾಖೆಯನ್ನು ಅಂಬೇಡ್ಕರ್ ಭವನಕ್ಕೆ ಸ್ಥಳಾಂತರಿಸಬೇಕೆಂಬ ಬೇಡಿಕೆ ಹಲವು ಬಾರಿ ಎಸ್ಸಿ/ಎಸ್ಟಿ ಸಭೆಗಳಲ್ಲಿ ಪ್ರಸ್ತಾಪಗೊಂಡಿದ್ದು, ಇದೀಗ ಅದು ಈಡೇರಿದೆ.



ಆದರೆ, ಕಚೇರಿ ಸ್ಥಳಾಂತರಗೊಂಡ ಬಳಿಕವೂ ಅಂಬೇಡ್ಕರ್ ಭವನದ ಮುಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಾಮಫಲಕ ಅಳವಡಿಸದಿರುವುದು ಹಾಗೂ ಮುಂಭಾಗದ ಪ್ರವೇಶ ದ್ವಾರಕ್ಕೆ ಬೀಗ ಹಾಕಿರುವುದರಿಂದ ಫಲಾನುಭವಿಗಳು ಗೊಂದಲಕ್ಕೆ ಒಳಗಾಗುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಮೊದಲ ಬಾರಿಗೆ ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಕಚೇರಿಯ ಸ್ಥಳ ಪತ್ತೆಹಚ್ಚುವುದು ಕಷ್ಟವಾಗುತ್ತಿದ್ದು, ಹಲವರು ಮಾಹಿತಿ ಸಿಗದೆ ಹಿಂದಿರುಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಇದಲ್ಲದೆ, ಕಚೇರಿಗೆ ಹಿಂಭಾಗದ ಪ್ರವೇಶ ದ್ವಾರದ ಮೂಲಕವೇ ತೆರಳಬೇಕಾದ ಅನಿವಾರ್ಯತೆ ಉಂಟಾಗಿರುವುದರಿಂದ ವಯೋವೃದ್ಧರು, ಮಹಿಳೆಯರು ಹಾಗೂ ಗ್ರಾಮೀಣ ಪ್ರದೇಶಗಳಿಂದ ಬರುವ ಫಲಾನುಭವಿಗಳು ತೊಂದರೆ ಅನುಭವಿಸುತ್ತಿದ್ದಾರೆ ಎನ್ನಲಾಗಿದೆ.
ಸಾರ್ವಜನಿಕರ ಅನುಕೂಲಕ್ಕಾಗಿ ಅಂಬೇಡ್ಕರ್ ಭವನದ ಮುಂಭಾಗದಲ್ಲೇ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ನಾಮಫಲಕವನ್ನು ತಕ್ಷಣ ಅಳವಡಿಸಬೇಕು. ಜೊತೆಗೆ ಮುಂಭಾಗದ ಪ್ರವೇಶ ದ್ವಾರವನ್ನು ಸಾರ್ವಜನಿಕರ ಬಳಕೆಗೆ ತೆರೆಯುವ ಮೂಲಕ ಫಲಾನುಭವಿಗಳಿಗೆ ಆಗುತ್ತಿರುವ ಗೊಂದಲ ಮತ್ತು ಪರದಾಟಕ್ಕೆ ಅಂತ್ಯ ಹಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


