ಬಂಟ್ವಾಳ, ಜು.3: ಮೆಲ್ಕಾರ್‌ನ ಬಿರ್ವ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಎ.ಆರ್.ಟಿ.ಒ. (ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ) ಕಚೇರಿಯನ್ನು ಖಾಸಗಿ ಕಟ್ಟಡದಿಂದ ಸ್ಥಳಾಂತರಿಸಿ ಸರ್ಕಾರಿ ಕಟ್ಟಡಕ್ಕೆ ವರ್ಗಾಯಿಸುವಂತೆ ಸಾಮಾಜಿಕ ಕಾರ್ಯಕರ್ತ ಖಾಲಿದ್ ನಂದಾವರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.
ಮನವಿಯಲ್ಲಿ, ಎ.ಆರ್.ಟಿ.ಒ. ಕಚೇರಿಗೆ ಸರ್ಕಾರದ ಬೊಕ್ಕಸದಿಂದ ಪ್ರತಿ ತಿಂಗಳು ಸುಮಾರು ₹4 ಲಕ್ಷ ಬಾಡಿಗೆ ಹಾಗೂ ತರಬೇತಿ ಮೈದಾನಕ್ಕಾಗಿ ಹೆಚ್ಚುವರಿಯಾಗಿ ₹25 ಸಾವಿರ ಪಾವತಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ.


ರಾಜಕೀಯ ಪ್ರಭಾವದಿಂದ ಈ ವ್ಯವಸ್ಥೆ ಮುಂದುವರಿಯುತ್ತಿದ್ದು, ಸಾರ್ವಜನಿಕರಿಂದ ತೆರಿಗೆ ಮತ್ತು ವಿವಿಧ ಶುಲ್ಕಗಳ ರೂಪದಲ್ಲಿ ಸಂಗ್ರಹವಾಗುವ ಹಣವನ್ನು ಖಾಸಗಿ ಕಟ್ಟಡಕ್ಕೆ ಬಾಡಿಗೆಯಾಗಿ ಪಾವತಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಅವರು ದೂರಿದ್ದಾರೆ.
ಇದೇ ವೇಳೆ, ವಾಹನ ಚಾಲನಾ ಪರೀಕ್ಷೆಗಾಗಿ ಬಳಸಲಾಗುತ್ತಿರುವ ತರಬೇತಿ ಮೈದಾನ ಮಳೆಗಾಲದಲ್ಲಿ ಸಂಪೂರ್ಣ ಕೆಸರಿನಿಂದ ಕೂಡಿರುವುದರಿಂದ ಸಾರ್ವಜನಿಕರು ಹಾಗೂ ಚಾಲನಾ ಪರೀಕ್ಷೆಗೆ ಆಗಮಿಸುವ ಅಭ್ಯರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಆದ್ದರಿಂದ ಎ.ಆರ್.ಟಿ.ಒ. ಕಚೇರಿಗೆ ಶಾಶ್ವತ ಸರ್ಕಾರಿ ಸ್ಥಳವನ್ನು ಗುರುತಿಸಿ ಅಲ್ಲಿಗೆ ಸ್ಥಳಾಂತರಿಸಬೇಕು. ಅಲ್ಲಿಯವರೆಗೆ ಬಿಸಿರೋಡಿನ ಕೆ.ಎಸ್.ಆರ್.ಟಿ.ಸಿ. ನಿಗಮದ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಕಚೇರಿ ಕಾರ್ಯನಿರ್ವಹಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯನ್ನು ಖಾಲಿದ್ ನಂದಾವರ ಆಗ್ರಹಿಸಿದ್ದಾರೆ.


