ಕಾಸರಗೋಡು, ಜು. 4: ಮಹಿಳೆಯರಿಗೆ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಜಾರಿಯಾದ ಬಳಿಕ ಖಾಸಗಿ ಬಸ್ಗಳ ಆದಾಯದಲ್ಲಿ ಗಣನೀಯ ಕುಸಿತ ಉಂಟಾಗಿದ್ದು, ನಷ್ಟದಲ್ಲಿರುವ ಖಾಸಗಿ ಬಸ್ ಉದ್ಯಮವನ್ನು ರಕ್ಷಿಸುವಂತೆ ಆಗ್ರಹಿಸಿ ಜುಲೈ 6ರಂದು (ಸೋಮವಾರ) ಜಿಲ್ಲೆಯಾದ್ಯಂತ ಒಂದು ದಿನದ ಎಚ್ಚರಿಕೆ ಮುಷ್ಕರ ನಡೆಸಲು ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ತೀರ್ಮಾನಿಸಿದೆ.
ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಫೆಡರೇಷನ್ ಪದಾಧಿಕಾರಿಗಳು, ಕೆಎಸ್ಆರ್ಟಿಸಿ ಸಂಚರಿಸುವ ಮಾರ್ಗಗಳಲ್ಲಿ ಓಡಾಡುವ ಖಾಸಗಿ ಬಸ್ಗಳಿಗೆ ಡೀಸೆಲ್ ವೆಚ್ಚ ಭರಿಸುವಷ್ಟು ಆದಾಯವೂ ದೊರೆಯುತ್ತಿಲ್ಲ. ಇತರ ಮಾರ್ಗಗಳಲ್ಲಿಯೂ ಪ್ರತಿ ಬಸ್ಗೆ ದಿನಕ್ಕೆ ₹1,500ರಿಂದ ₹3,000ರವರೆಗೆ ಆದಾಯ ನಷ್ಟವಾಗುತ್ತಿದೆ ಎಂದು ಆರೋಪಿಸಿದರು.

ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಸೋಮವಾರ ಜಿಲ್ಲೆಯಾದ್ಯಂತ ಖಾಸಗಿ ಬಸ್ ಸಂಚಾರ ಸ್ಥಗಿತಗೊಳಿಸಿ, ಬೆಳಿಗ್ಗೆ 10.30ಕ್ಕೆ ಕಾಸರಗೋಡು ಕಲೆಕ್ಟರೇಟ್ಗೆ ಮೆರವಣಿಗೆ ಹಾಗೂ ಧರಣಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಮಟ್ಟದಲ್ಲಿಯೂ ‘ಪ್ರಿಯದರ್ಶಿನಿ’ ಯೋಜನೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಖಾಸಗಿ ಬಸ್ ಉದ್ಯಮವನ್ನು ರಕ್ಷಿಸುವಂತೆ ಆಗ್ರಹಿಸಿ ಜುಲೈ 20ರಿಂದ 26ರವರೆಗೆ ತಿರುವನಂತಪುರಂ ಸೆಕ್ರೆಟರಿಯೇಟ್ ಎದುರು ಸಂಯುಕ್ತ ಸಮರ ಸಮಿತಿಯಿಂದ ಒಂದು ವಾರಗಳ ರಿಲೇ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.
ಸೋಮವಾರದ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ಬಸ್ ಮಾಲೀಕರು, ಸಿಬ್ಬಂದಿ, ಕಾರ್ಮಿಕರು ಹಾಗೂ ಅವರ ಕುಟುಂಬದವರು ಭಾಗವಹಿಸಲಿದ್ದಾರೆ. ಸರ್ಕಾರ ಬೇಡಿಕೆಗಳನ್ನು ಪರಿಗಣಿಸದಿದ್ದಲ್ಲಿ ತಿರುವನಂತಪುರಂನಲ್ಲಿ ಮುಂದಿನ ಹಂತದ ಸತ್ಯಾಗ್ರಹವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರೈವೇಟ್ ಬಸ್ ಆಪರೇಟರ್ಸ್ ಫೆಡರೇಷನ್ ಜಿಲ್ಲಾ ಅಧ್ಯಕ್ಷ ಗಿರೀಶ್ ಕೆ., ಪ್ರಧಾನ ಕಾರ್ಯದರ್ಶಿ ಟಿ. ಲಕ್ಷ್ಮಣನ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಗಿರಿ ಕೃಷ್ಣನ್ ಹಾಗೂ ಬಿಎಂಎಸ್ ಜಿಲ್ಲಾ ಕಾರ್ಯದರ್ಶಿ ಬಾಬು ಉಪಸ್ಥಿತರಿದ್ದರು.


