ಕರೋಪಾಡಿಯಲ್ಲಿ ಅಕ್ರಮ ಕೆಂಪುಕಲ್ಲು, ಮಣ್ಣು ಗಣಿಗಾರಿಕೆ ಮೇಲೆ ದಾಳಿ: ಯಂತ್ರೋಪಕರಣ, ವೇ-ಬ್ರಿಡ್ಜ್ ವಶ

ಬಂಟ್ವಾಳ, ಜು. 4: ತಾಲೂಕಿನ ಕರೋಪಾಡಿ ಗ್ರಾಮದ ಮುಗುಳಿ ಪ್ರದೇಶದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಹಾಗೂ ಮಣ್ಣು ಗಣಿಗಾರಿಕೆ ನಡೆಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸ್ ಠಾಣೆಯ ಉಪನಿರೀಕ್ಷಕ ರಾಮಕೃಷ್ಣ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿ, ವಾಹನಗಳು, ಯಂತ್ರೋಪಕರಣಗಳು ಹಾಗೂ ವೇ-ಬ್ರಿಡ್ಜ್‌ನ್ನು ವಶಪಡಿಸಿಕೊಂಡಿದೆ.

ದಾಳಿಯ ವೇಳೆ ಮುಳಿಗದ್ದೆ ಝಕಾರಿಯಾ ಹಾಗೂ ಇತರರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರು ಎನ್ನಲಾಗಿದ್ದು, ಪೊಲೀಸ್ ವಾಹನವನ್ನು ಕಂಡ ಕೂಡಲೇ ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಯಾವುದೇ ಪರವಾನಗಿ ಇಲ್ಲದೆ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ದೃಢಪಟ್ಟಿದ್ದು, ಕೃತ್ಯಕ್ಕೆ ಬಳಸಲಾಗುತ್ತಿದ್ದ ಯಂತ್ರೋಪಕರಣಗಳನ್ನು ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ.

ಇದೇ ಪ್ರದೇಶದಲ್ಲಿ ಅಕ್ರಮವಾಗಿ ಮಣ್ಣು ಗಣಿಗಾರಿಕೆಯೂ ನಡೆಯುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಮಣ್ಣು ಸಾಗಣೆ ಮಾಡುವ ಲಾರಿಗಳ ತೂಕ ಮಾಪನಕ್ಕಾಗಿ ನಿರ್ಮಿಸಲಾಗಿದ್ದ ವೇ-ಬ್ರಿಡ್ಜ್, ಕಟ್ಟಡ ಹಾಗೂ ಇತರೆ ಯಂತ್ರೋಪಕರಣಗಳನ್ನೂ ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 148/2026 ದಾಖಲಿಸಲಾಗಿದೆ. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) 2023ರ ಕಲಂ 303(2), ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957ರ ಕಲಂ 4(1) ಹಾಗೂ 21 ಮತ್ತು ಕರ್ನಾಟಕ ಸಣ್ಣ ಖನಿಜ ನಿಯಮಗಳು, 1994ರ ಕಲಂ 3 ಹಾಗೂ 44ರಡಿ ಮುಳಿಗದ್ದೆ ಝಕಾರಿಯಾ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಿಸಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!