ಜುಲೈ 26ರಂದು ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ; ₹10 ಲಕ್ಷ ವೆಚ್ಚದ ಕಾಮಗಾರಿಗೆ ಶುಭಾರಂಭ
ಕಾಸರಗೋಡು, ಜು. 4: ಕಾಸರಗೋಡು ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯದ ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ ಇದೇ ಜುಲೈ 26ರಂದು ನಡೆಯಲಿದ್ದು, ಮಾಜಿ ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸೋಮಶೇಖರ್ (ಐಎಎಸ್) ಅವರ ಸರ್ವಾಧ್ಯಕ್ಷತೆಯಲ್ಲಿ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ” ಆಯೋಜಿಸಲಾಗಿದೆ.
ಕನ್ನಡ ಭವನದ ನಿರ್ದೇಶಕರಾದ ಡಾ. ವೆಂಕಟ್ರಮಣ ಹೊಳ್ಳ ಅವರ ಅಧ್ಯಕ್ಷತೆಯಲ್ಲಿ ಸಮ್ಮೇಳನ ಸಮಿತಿ ರಚನೆಯಾಗಿ ವಿವಿಧ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ. ರಜತ ಸಂಭ್ರಮದ ವಿಶೇಷ ಕೊಡುಗೆಯಾಗಿ, ಕನ್ನಡ ಭವನ ಕೇಂದ್ರ ಸಮಿತಿಯ ಉಸ್ತುವಾರಿಯಲ್ಲಿ ಉಚಿತ ವಸತಿ ಸೌಲಭ್ಯಕ್ಕಾಗಿ ಎರಡು ಸುಸಜ್ಜಿತ ಕೊಠಡಿಗಳ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ.
ಈ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ಶನಿವಾರ (ಜು. 4) ಬೆಳಿಗ್ಗೆ 10.36ರ ಶುಭ ಮುಹೂರ್ತದಲ್ಲಿ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಕನ್ನಡ ಭವನದ ಹಿತೈಷಿ ಹಾಗೂ ನಿರ್ದೇಶಕರಾದ ಶ್ರೀ ವೆಂಕಟ್ರಮಣ ಹೊಳ್ಳ ಅವರು ಪ್ರಾರ್ಥನೆ ಸಲ್ಲಿಸಿ ದೀಪ ಬೆಳಗಿಸುವ ಮೂಲಕ ಕಾಮಗಾರಿಗೆ ಅಧಿಕೃತ ಚಾಲನೆ ನೀಡಿದರು.

ಕನ್ನಡ ಭವನದ ಸ್ಥಾಪಕ ಸಂಚಾಲಕರಾದ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾರಾಣಿ ಟೀಚರ್ ಅವರ ನೇತೃತ್ವದಲ್ಲಿ ಕಾಮಗಾರಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ವಸಂತ್ ಕೆರೆಮನೆ, ಸಹ ಕಾರ್ಯದರ್ಶಿ ಪ್ರದೀಪ್ ನಾಯ್ಕ್ ನಾಗರಕಟ್ಟೆ, ಲೋಕೇಶ್ ಶೆಟ್ಟಿ (ಜೆ.ಪಿ. ನಗರ), ಶರತ್ ಮೀಪುಗುರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸುಮಾರು ₹10 ಲಕ್ಷ ವೆಚ್ಚದ ಈ ಕಾಮಗಾರಿಯ ಜವಾಬ್ದಾರಿಯನ್ನು ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂದ್ಯಾರಾಣಿ ದಂಪತಿಗಳ ಪುತ್ರ, ಚೀನಾ ದೇಶದಲ್ಲಿ ಹಾರ್ಬರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಸನತ್ ಕುಮಾರ್ ಬಿ.ಇ. ವಹಿಸಿಕೊಂಡಿದ್ದಾರೆ. ಅವರ ಸಮಾಜಮುಖಿ ಕೊಡುಗೆಯನ್ನು ಕನ್ನಡ ಭವನ ಕೇಂದ್ರ ಸಮಿತಿಯು ಅಭಿನಂದಿಸಿದೆ.
ಈ ಹೊಸ ಕೊಠಡಿಗಳ ನಿರ್ಮಾಣದಿಂದ ಕನ್ನಡ ಭವನದಲ್ಲಿ ನಡೆಯುವ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಿಗೆ ಆಗಮಿಸುವ ಅತಿಥಿಗಳಿಗೆ ಉಚಿತ ವಸತಿ ಸೌಲಭ್ಯ ಇನ್ನಷ್ಟು ವಿಸ್ತಾರಗೊಳ್ಳಲಿದೆ ಎಂದು ಸಮಿತಿ ತಿಳಿಸಿದೆ.


