ಮಂಗಳೂರು: ಜಿಲ್ಲೆಯಾದ್ಯಂತ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ (ಎನ್ಯುಮರೇಷನ್) ಪ್ರಕ್ರಿಯೆಯಲ್ಲಿ ತಾಂತ್ರಿಕ ಹಾಗೂ ಕಾರ್ಯನಿರ್ವಹಣಾ ಸಮಸ್ಯೆಗಳು ಎದುರಾಗುತ್ತಿದ್ದು, ಸರ್ಕಾರ ಮತ್ತು ಚುನಾವಣಾ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜಾ ಆಗ್ರಹಿಸಿದರು.
ಮನಪಾ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 18,04,476 ಮತದಾರರಿದ್ದು, ಸುಮಾರು 16 ಲಕ್ಷ ಮಂದಿಯ ಮ್ಯಾಪಿಂಗ್ ಪೂರ್ಣಗೊಂಡಿದ್ದು, 1,92,284 ಮತದಾರರ ಮ್ಯಾಪಿಂಗ್ ಬಾಕಿಯಿದೆ ಎಂದು ಹೇಳಿದರು. ಮ್ಯಾಪಿಂಗ್ ಆಗದಿದ್ದರೂ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಕೈಬಿಡುವುದಿಲ್ಲ ಎಂಬ ಬಗ್ಗೆ ಚುನಾವಣಾ ಇಲಾಖೆ ಸ್ಪಷ್ಟನೆ ನೀಡಬೇಕು ಎಂದರು.

ಜನರಲ್ಲಿ ತಪ್ಪು ಕಲ್ಪನೆ ಮತ್ತು ಆತಂಕ ಹೆಚ್ಚಾಗಿದ್ದು, ಈ ಬಗ್ಗೆ ಜಾಗೃತಿ ಮೂಡಿಸಲು ಬಿಡುಗಡೆ ಮಾಡಿದ ಧ್ವನಿ ಸಂದೇಶ ಒಂದೇ ದಿನದಲ್ಲಿ 1.80 ಲಕ್ಷ ಜನರನ್ನು ತಲುಪಿದೆ ಎಂದು ತಿಳಿಸಿದರು.
ಎಲ್ಲಾ ಬಿಎಲ್‌ಒಗಳಿಗೆ ತರಬೇತಿ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಸುಮಾರು 80 ಶೇಕಡಾ ಬಿಎಲ್‌ಒಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದ ಅವರು, ಪ್ರತಿಯೊಬ್ಬ ಬಿಎಲ್‌ಒ ಜೊತೆ ಪರಿಣಿತರನ್ನು ನಿಯೋಜಿಸಿ ಸಾರ್ವಜನಿಕರಿಗೆ ಅರ್ಜಿ ಭರ್ತಿ ಮಾಡಲು ನೆರವಾಗುವಂತೆ ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ಮತದಾರರಿಗೆ ಎನ್ಯುಮರೇಷನ್ ಫಾರ್ಮ್ ವಿತರಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದರೂ, ಹಲವು ಕುಟುಂಬಗಳಿಗೆ ಫಾರ್ಮ್ ತಲುಪಿಲ್ಲ ಎಂಬ ದೂರುಗಳು ಬರುತ್ತಿವೆ ಎಂದು ಅವರು ಹೇಳಿದರು.
2002ರ ಮತದಾರರ ಪಟ್ಟಿಯ ಮಾಹಿತಿ ಲಭ್ಯವಿಲ್ಲದ ಕಾರಣ ಹಳೆಯ ವಿಧಾನಸಭಾ ಕ್ಷೇತ್ರ, ಬೂತ್ ಹಾಗೂ ಪಾರ್ಟ್ ಸಂಖ್ಯೆಗಳ ವಿವರಗಳನ್ನು ಭರ್ತಿ ಮಾಡಲು ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ಜನರು, ಕೊರಗ ಸಮುದಾಯ, ಮಲೆಕುಡಿಯರು, ವಯೋವೃದ್ಧರು ಹಾಗೂ ಶಿಕ್ಷಣವಿಲ್ಲದವರಿಗೆ ಈ ಪ್ರಕ್ರಿಯೆ ಮತ್ತಷ್ಟು ಕಷ್ಟಕರವಾಗಿದೆ ಎಂದು ಹೇಳಿದರು.
ಮತದಾರರ ಮ್ಯಾಪಿಂಗ್ ಪ್ರಕ್ರಿಯೆಯನ್ನು ಯುದ್ಧೋಪಾದಿಯಲ್ಲಿ ನಡೆಸಿ, ಅಗತ್ಯ ಸಿಬ್ಬಂದಿ, ತಾಂತ್ರಿಕ ನೆರವು ಹಾಗೂ ಸಹಾಯ ಶಿಬಿರಗಳನ್ನು ಆರಂಭಿಸಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ್ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಭಾಸ್ಕರ್ ರಾವ್, ಮೀನಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.


