ಕುದ್ಮುಲ್ ರಂಗರಾವ್ ಸಮಾಧಿ ಅಭಿವೃದ್ಧಿಗೆ ಮುಡಾದಿಂದಲೇ 3 ಕೋಟಿ ರೂ. ಮೀಸಲಿಡಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ


ರಾಜ್ಯ ಸರ್ಕಾರ ಅನುದಾನ ರದ್ದುಪಡಿಸಿರುವುದು ಖಂಡನೀಯ; ಮುಡಾ ಅಧ್ಯಕ್ಷರು, ಆಯುಕ್ತರಿಗೆ ಪತ್ರ

ಮಂಗಳೂರು, ಜುಲೈ 6: ನಗರದ ಅತ್ತಾವರ ಬಾಬುಗುಡ್ಡೆಯಲ್ಲಿರುವ ದಲಿತೋದ್ದಾರಕ ಪೂಜನೀಯ ಕುದ್ಮುಲ್ ರಂಗರಾವ್ ಅವರ ಸಮಾಧಿ ಅಭಿವೃದ್ಧಿಗಾಗಿ ಮುಡಾ ವತಿಯಿಂದಲೇ 3 ಕೋಟಿ ರೂ. ಅನುದಾನ ಮೀಸಲಿಟ್ಟು ಕಾಮಗಾರಿ ಕೈಗೊಳ್ಳುವಂತೆ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮುಡಾ ಅಧ್ಯಕ್ಷರು ಹಾಗೂ ಆಯುಕ್ತರಿಗೆ ಪತ್ರ ಬರೆದಿರುವ ಅವರು, 2022ರಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ–1ರಡಿ ಕುದ್ಮುಲ್ ರಂಗರಾವ್ ಅವರ ಸಮಾಧಿಯನ್ನು ಪ್ರವಾಸಿ ತಾಣವಾಗಿ ಹಾಗೂ ಸಮಗ್ರವಾಗಿ ಅಭಿವೃದ್ಧಿಪಡಿಸಲು 3 ಕೋಟಿ ರೂ. ಅನುದಾನ ಮಂಜೂರಾಗಿತ್ತು. ಯೋಜನೆಗೆ ಗುದ್ದಲಿ ಪೂಜೆಯನ್ನೂ ನೆರವೇರಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಆದರೆ, ರಾಜ್ಯದಲ್ಲಿ ಸರ್ಕಾರ ಬದಲಾದ ಬಳಿಕ ಕಾಂಗ್ರೆಸ್ ಸರ್ಕಾರ ಈ ಅನುದಾನವನ್ನು ರದ್ದುಗೊಳಿಸಿರುವುದು ಖಂಡನೀಯ ಮತ್ತು ಬೇಸರದ ಸಂಗತಿಯಾಗಿದೆ. ಕಳೆದ ಮೂರು ವರ್ಷಗಳಿಂದ ಈ ಯೋಜನೆಗೆ ಯಾವುದೇ ಹೊಸ ಅನುದಾನವೂ ಬಿಡುಗಡೆಯಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ಪರಿಶಿಷ್ಟ ವರ್ಗದ ಜನರ ಏಳಿಗೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಮಹಾತ್ಮರ ಸಮಾಧಿಯ ಅಭಿವೃದ್ಧಿ ಕಾಮಗಾರಿ ಹಿನ್ನಡೆಯಾಗಲು ಅವಕಾಶ ನೀಡಬಾರದು. ಆದ್ದರಿಂದ ಮುಡಾ ತನ್ನ ಸ್ವಂತ ಅನುದಾನದಿಂದಲೇ 3 ಕೋಟಿ ರೂ. ಮೀಸಲಿಟ್ಟು ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!