ಕಾಸರಗೋಡು:* 101 ಫ್ಲ್ಯಾಟ್‌ಗಳನ್ನು ಹೊಂದಿರುವ ಕಾಸರಗೋಡಿನ ಸುನಾಮಿ ಕಾಲೊನಿಯ ಸೆಪ್ಟಿಕ್ ಟ್ಯಾಂಕ್ ತುಂಬಿ ಹರಿಯುತ್ತಿರುವುದಾಗಿ ನಿವಾಸಿಗಳು ಆರೋಪಿಸಿದ್ದಾರೆ.

ಕಾಲೊನಿಯಲ್ಲಿರುವ ಇಷ್ಟೊಂದು ಕುಟುಂಬಗಳ ತ್ಯಾಜ್ಯವನ್ನು ಪ್ರಸ್ತುತ ಸೆಪ್ಟಿಕ್ ಟ್ಯಾಂಕ್ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ದೊಡ್ಡ ಸಾಮರ್ಥ್ಯದ ಹೊಸ ಸೆಪ್ಟಿಕ್ ಟ್ಯಾಂಕ್ ನಿರ್ಮಿಸಬೇಕು ಹಾಗೂ ಸಾಂಕ್ರಾಮಿಕ ರೋಗಗಳಿಂದ ನಿವಾಸಿಗಳಿಗೆ ಸುರಕ್ಷತೆ ಒದಗಿಸಬೇಕು ಎಂದು ಆಗ್ರಹಿಸಿ ನಿವಾಸಿಗಳು ನಗರಸಭೆ ಕಚೇರಿ ಎದುರು ಧರಣಿ ನಡೆಸಿದರು.

ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರನ್ನು ಆರೋಗ್ಯದ ಅಪಾಯದಿಂದ ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. ಜೊತೆಗೆ, ಅಪಾಯದ ಸ್ಥಿತಿಯಲ್ಲಿರುವ ಕಾಲೊನಿಯ ಫ್ಲ್ಯಾಟ್‌ಗಳಿಗೆ ಅಗತ್ಯ ದುರಸ್ತಿ ಕಾಮಗಾರಿಗಳನ್ನು ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
34ನೇ ವಾರ್ಡ್ ಸದಸ್ಯ ಸುನಿಲ್ ಶೆಟ್ಟಿ ಧರಣಿಯನ್ನು ಉದ್ಘಾಟಿಸಿದರು. ಬಳಿಕ ನಗರಸಭೆ ಅಧ್ಯಕ್ಷೆ ಶಾಹಿನಾ ಸಲೀಂ ಅವರಿಗೆ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು. ಕಾಲೊನಿಯ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಅವರು ಭರವಸೆ ನೀಡಿದರು.

ಕೆಲವು ದಿನಗಳ ಹಿಂದೆಯೂ ಸೆಪ್ಟಿಕ್ ಟ್ಯಾಂಕ್‌ನಿಂದ ಮಲಿನ ನೀರು ಹೊರಗೆ ಹರಿದಿತ್ತು ಎಂದು ನಿವಾಸಿಗಳು ತಿಳಿಸಿದ್ದಾರೆ. ಆಗ ಕಾಲೊನಿಯ ನಿವಾಸಿಗಳೇ ಸ್ವತಃ ಟ್ಯಾಂಕ್ ಸ್ವಚ್ಛಗೊಳಿಸಿದ್ದರು.


