ಕಣ್ಣೂರು:* ಮಹಿಳೆಯ ವೇಷ ಧರಿಸಿ ರಾತ್ರಿ ವೇಳೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡಗಳು ಹಾಗೂ ಮನೆಗಳಲ್ಲಿ ಕಳ್ಳತನ ನಡೆಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ವಯನಾಡಿನ ಪುಲ್ಪಳ್ಳಿ ನಿವಾಸಿ ರೋಮಿಯೋ ಬೇಬಿ (29) ಎಂದು ಗುರುತಿಸಲಾಗಿದೆ.

ನ್ಯೂ ಮಾಹಿ ಸೇತುವೆ ಸಮೀಪದ ಮೂರು ಕಟ್ಟಡಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಿದ್ಯುತ್ ವೈರಿಂಗ್ ಸಾಮಗ್ರಿಗಳನ್ನು ಕಳವು ಮಾಡಿದ್ದ ಆರೋಪದ ಮೇಲೆ ಆತನನ್ನು ಬಂಧಿಸಲಾಗಿದೆ.
ಇತ್ತೀಚಿನ ದಿನಗಳಲ್ಲಿ ನಿರಂತರ ಕಳ್ಳತನಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ಕಾವಲು ಕಾಯುತ್ತಿದ್ದರು. ಸೋಮವಾರ ಮುಂಜಾನೆ ಆರೋಪಿ ಕಳ್ಳತನಕ್ಕೆ ಯತ್ನಿಸುತ್ತಿದ್ದಾಗ ಸಾರ್ವಜನಿಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾತ್ರಿ ವೇಳೆ ಮಹಿಳೆಯ ವೇಷ ಧರಿಸಿ, ಯಾರಿಗೂ ಅನುಮಾನ ಬಾರದಂತೆ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಪ್ರವೇಶಿಸಿ ಕಳ್ಳತನ ನಡೆಸುವುದು ಆರೋಪಿಯ ಸಾಮಾನ್ಯ ವಿಧಾನವಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕಳ್ಳತನದ ವಸ್ತುಗಳ ಜೊತೆಗೆ ಆರೋಪಿ ಬಳಿ ಹಲವು ಮಹಿಳೆಯರ ಒಳಉಡುಪುಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವಸ್ತುಗಳು ಆತನ ಬಳಿ ಹೇಗೆ ಬಂದವು ಮತ್ತು ಪ್ರಕರಣದೊಂದಿಗೆ ಅವುಗಳಿಗೆ ಸಂಬಂಧವಿದೆಯೇ ಎಂಬುದರ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

