120 ಗ್ರಾಂ ಚಿನ್ನ ಅಡವಿಡಲು ಬಂದಿದ್ದ ಆರೋಪಿಗಳು ಪೊಲೀಸರ ಬಲೆಗೆ
ಕಡಬ, ಜುಲೈ 6: ಚಿನ್ನಾಭರಣಗಳನ್ನು ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್ನಲ್ಲಿ ಅಡವಿಟ್ಟು ಹಣ ಪಡೆಯುವ ಮೂಲಕ ವಂಚನೆ ನಡೆಸಲು ಸಂಚು ರೂಪಿಸಿದ್ದ ಆರೋಪದಡಿ ಇಬ್ಬರನ್ನು ಕಡಬ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಎಂದು ಗುರುತಿಸಲಾಗಿದೆ.

ಜುಲೈ 3ರಂದು ಸಂಜೆ ಕಡಬ ಪೇಟೆಯಲ್ಲಿ ಇಬ್ಬರು ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಪಡೆದ ಕಡಬ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ವಿಚಾರಣೆ ನಡೆಸಿದರು. ಈ ವೇಳೆ ಇಬ್ಬರೂ ಬ್ಯಾಂಕ್ನಲ್ಲಿ ಸುಮಾರು 120 ಗ್ರಾಂ ಚಿನ್ನವನ್ನು ಅಡವಿಡಲು ಬಂದಿರುವುದಾಗಿ ತಿಳಿಸಿದ್ದಾರೆ.
ಅವರ ವರ್ತನೆ ಅನುಮಾನಾಸ್ಪದವಾಗಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ಠಾಣೆಗೆ ಕರೆತಂದ ಪೊಲೀಸರು, ಆಭರಣಗಳ ಕುರಿತು ದಾಖಲಾತಿ ಕೇಳಿದಾಗ ಆರೋಪಿಗಳು ಯಾವುದೇ ಸಮರ್ಪಕ ದಾಖಲೆ ಅಥವಾ ಸಮಂಜಸವಾದ ಮಾಹಿತಿ ನೀಡಲು ವಿಫಲರಾದರು.
ವಿಚಾರಣೆ ವೇಳೆ, ಚಿನ್ನಾಭರಣಗಳನ್ನು ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾಡಿ ಬ್ಯಾಂಕ್ನಲ್ಲಿ ಅಡವಿಟ್ಟು ಹಣ ಪಡೆದು ಬ್ಯಾಂಕ್ಗೆ ವಂಚನೆ ಎಸಗುವ ಉದ್ದೇಶದಿಂದ ಬಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 83/2026ರಡಿ ಭಾರತೀಯ ನ್ಯಾಯ ಸಂಹಿತೆ (BNS)-2023ರ ಕಲಂ 318(4) ಹಾಗೂ 62ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ.


