ಬೆಂಗಳೂರು: ನಂದಿನಿ ಹಾಲಿನ ದರ ಪ್ರತಿ ಲೀಟರ್ಗೆ ₹10ರಷ್ಟು ಹೆಚ್ಚಿಸುವಂತೆ ಹಾಲು ಒಕ್ಕೂಟಗಳು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದು, ಈ ಕುರಿತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಇಂದು ಸಭೆ ನಡೆಯಲಿದೆ. ಸಭೆಯ ಬಳಿಕ ದರ ಏರಿಕೆ ಕುರಿತು ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆಯಿದೆ.

ಕೆಎಂಎಫ್ ವಾರ್ಷಿಕ ಮಹಾಸಭೆಯ ಬಳಿಕ ಮಾತನಾಡಿದ ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್, ಹೈನುಗಾರಿಕೆ ತೀವ್ರ ಸಂಕಷ್ಟದಲ್ಲಿದ್ದು, ಮೇವಿನ ದರ, ಪೆಟ್ರೋಲ್-ಡೀಸೆಲ್ ಹಾಗೂ ಉತ್ಪಾದನಾ ವೆಚ್ಚ ಹೆಚ್ಚಳದಿಂದ ಹಾಲಿನ ದರ ಏರಿಕೆ ಅನಿವಾರ್ಯವಾಗಿದೆ. ರೈತರ ಒತ್ತಾಯದ ಮೇರೆಗೆ ಕನಿಷ್ಠ ಲೀಟರ್ಗೆ ₹10ರಷ್ಟು ದರ ಹೆಚ್ಚಳಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

ಬರಗಾಲದಿಂದ ಮೇವಿನ ಲಭ್ಯತೆ ಕುಸಿದಿದ್ದು, ಜೋಳ ಹಾಗೂ ಭತ್ತದ ಹೊಟ್ಟು ಸೇರಿದಂತೆ ಜಾನುವಾರುಗಳ ಮೇವಿನ ಕಚ್ಚಾ ವಸ್ತುಗಳ ದರ ಸುಮಾರು ಶೇ.25ರಷ್ಟು ಹೆಚ್ಚಾಗಿದೆ. ಪ್ಲಾಸ್ಟಿಕ್ ಸ್ಯಾಚೆಟ್ ಹಾಗೂ ಸಾಗಣೆ ವೆಚ್ಚವೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಿದೆ.
ಸರ್ಕಾರ ದರ ಏರಿಕೆಗೆ ಸಮ್ಮತಿ ನೀಡಿದರೆ ನಂದಿನಿ ಹಾಲಿನ ಜತೆಗೆ ಮೊಸರು, ಬೆಣ್ಣೆ, ತುಪ್ಪ ಹಾಗೂ ಸಿಹಿತಿಂಡಿಗಳು ಸೇರಿದಂತೆ ವಿವಿಧ ಹಾಲಿನ ಉತ್ಪನ್ನಗಳ ಬೆಲೆಯೂ ಹೆಚ್ಚಾಗುವ ಸಾಧ್ಯತೆಯಿದೆ.

