ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ವಿರುದ್ಧ ಸಂಘ ಪರಿವಾರ ಕಾರ್ಯಕರ್ತರ ಬ್ಯಾನರ್; ರಾಜಕೀಯ ವಲಯದಲ್ಲಿ ಸಂಚಲನ

ಕುಂಬಳೆ | ಜು. 9: ಬಿಜೆಪಿ ಬೆಂಬಲಿತ ಸಂಘ ಪರಿವಾರ ಪೋಷಿತ ಸಹಕಾರ ಭಾರತಿ ಆಡಳಿತವಿರುವ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಆಡಳಿತ ಮಂಡಳಿ ವಿರುದ್ಧವೇ ಸಂಘ ಪರಿವಾರದ ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಘಟನೆ ಕುಂಬಳೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಕುಂಬಳೆ ಪೇಟೆಯಲ್ಲಿರುವ ಬ್ಯಾಂಕ್ ಕಚೇರಿ ಎದುರು ‘ಬಂಬ್ರಾಣದ ನೊಂದ ಸ್ವಯಂಸೇವಕರು ಹಾಗೂ ಬಿಜೆಪಿ ಕಾರ್ಯಕರ್ತರು’ ಎಂಬ ಹೆಸರಿನಲ್ಲಿ ಅಳವಡಿಸಲಾದ ಬ್ಯಾನರ್ ರಾಜಕೀಯ ಹಾಗೂ ಸಂಘ ಪರಿವಾರ ವಲಯದಲ್ಲಿ ಸಂಚಲನ ಮೂಡಿಸಿದೆ.

ಬ್ಯಾನರ್‌ನಲ್ಲಿ ಮಾಡಲಾದ ಆರೋಪಗಳ ಪ್ರಕಾರ, ಕಳೆದ ಎರಡು ವರ್ಷಗಳಿಂದ ರಾತ್ರಿ ಕಾವಲುಗಾರರ ತಾತ್ಕಾಲಿಕ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂಘ ಸ್ವಯಂಸೇವಕ ಹಾಗೂ ಬಿಜೆಪಿ ಕಾರ್ಯಕರ್ತನನ್ನು ಯಾವುದೇ ಲೋಪದೋಷಗಳಿಲ್ಲದೆ ಸೇವೆಯಿಂದ ವಜಾಗೊಳಿಸಲಾಗಿದೆ. ಅಲ್ಲದೆ, ಕ್ಲರ್ಕ್ ಹುದ್ದೆಯಲ್ಲಿದ್ದ ಮತ್ತೋರ್ವ ಸಂಘ ಸ್ವಯಂಸೇವಕರನ್ನು ಅಮಾನತುಗೊಳಿಸಿರುವುದಾಗಿ ಆರೋಪಿಸಲಾಗಿದೆ.

ಈ ಕ್ರಮಗಳು ಬ್ಯಾಂಕ್ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರವಾಗಿದ್ದು, ಉಪಾಧ್ಯಕ್ಷರು ಹಾಗೂ ನಿರ್ದೇಶಕರು ಸಹ ಇದಕ್ಕೆ ಬೆಂಬಲ ನೀಡಿದ್ದಾರೆ ಎಂದು ಬ್ಯಾನರ್‌ನಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ, “ಸಹಕಾರಿ ಬ್ಯಾಂಕ್‌ನ ಆಡಳಿತ ಮಂಡಳಿಯನ್ನು ಅಧಿಕಾರಕ್ಕೆ ತರಲು ಹಗಲಿರುಳು ದುಡಿದ ಸ್ವಯಂಸೇವಕರ ಪರವಾಗಿ ವಿಘ್ನ ಸಂತೋಷಿಗಳಾದ ಆಡಳಿತ ಮಂಡಳಿಗೆ ಹೃತ್ಪೂರ್ವಕ ಅಭಿನಂದನೆಗಳು” ಎಂದು ವ್ಯಂಗ್ಯಾತ್ಮಕವಾಗಿ ಬರೆಯುವ ಮೂಲಕ ಆಡಳಿತ ಮಂಡಳಿಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಗಿದೆ.

ಸಂಘ ಪರಿವಾರದ ಒಂದು ಬಣವೇ ಸಾರ್ವಜನಿಕವಾಗಿ ಬ್ಯಾಂಕ್ ಆಡಳಿತ ಮಂಡಳಿಯ ವಿರುದ್ಧ ಧ್ವನಿ ಎತ್ತಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!