ಪಹಲ್ಗಾಮ್ ಉಗ್ರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ವಿರುದ್ಧ ಹೆಚ್ಚುವರಿ ಆರೋಪಪಟ್ಟಿ ಸಲ್ಲಿಸಿದೆ.

ಜಮ್ಮುವಿನ ವಿಶೇಷ ಎನ್ಐಎ ನ್ಯಾಯಾಲಯಕ್ಕೆ ಸಲ್ಲಿಸಲಾದ ಈ ಪೂರಕ ಆರೋಪಪಟ್ಟಿಯಲ್ಲಿ, ಹಫೀಜ್ ಸಯೀದ್ ವಿರುದ್ಧ ವೈಯಕ್ತಿಕವಾಗಿ ಹಾಗೂ ಲಷ್ಕರ್-ಎ-ತೊಯ್ಬಾ ಮತ್ತು ದಿ ರೆಸಿಸ್ಟನ್ಸ್ ಫ್ರಂಟ್ (ಟಿಆರ್ಎಫ್) ಸಂಘಟನೆಯ ಮುಖ್ಯಸ್ಥನಾಗಿ ವಿವಿಧ ಆರೋಪಗಳನ್ನು ಹೊರಿಸಲಾಗಿದೆ.
ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಸೇರಿದಂತೆ ಹಲವು ಕಾನೂನುಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಾರತ ವಿರುದ್ಧ ಯುದ್ಧ ಘೋಷಿಸಲು ಸಂಚು ರೂಪಿಸಿದ ಆರೋಪವೂ ಆರೋಪಪಟ್ಟಿಯಲ್ಲಿ ಸೇರಿದೆ.

ಹೆಚ್ಚುವರಿ ಆರೋಪಪಟ್ಟಿಯಲ್ಲಿ, ದಾಳಿಯ ಸಂಚು ರೂಪಿಸುವುದು ಮತ್ತು ಅದನ್ನು ಕಾರ್ಯಗತಗೊಳಿಸುವಲ್ಲಿ ಭಾಗಿಯಾಗಿದ್ದ ಆರೋಪದಡಿ ಟಿಆರ್ಎಫ್ ಮುಖ್ಯಸ್ಥ ಹಬೀಬುಲ್ಲಾ ಮಾಲಿಕ್ ಅಲಿಯಾಸ್ ಸಾಜಿದ್ ಜಾಟ್ ಅವರನ್ನೂ ಎನ್ಐಎ ಆರೋಪಿಯಾಗಿ ಸೇರಿಸಿದೆ.

ಒಟ್ಟು 1,597 ಪುಟಗಳ ಆರೋಪಪಟ್ಟಿಯಲ್ಲಿ ಪಾಕಿಸ್ತಾನದ ಸಂಚು, ಹಫೀಜ್ ಸಯೀದ್ ಅವರ ಪಾತ್ರ ಹಾಗೂ ತನಿಖೆಯ ವೇಳೆ ಎನ್ಐಎ ಸಂಗ್ರಹಿಸಿದ ಸಾಕ್ಷ್ಯಾಧಾರಗಳ ವಿವರಗಳನ್ನು ಒಳಗೊಂಡಿದೆ.

