ಮಂಜೇಶ್ವರ: ಕುಂಬಳೆಯಲ್ಲೊಂದು ಆಘಾತಕಾರಿ ಘಟನೆ ನಡೆದಿದ್ದು, ಟ್ಯೂಷನ್ಗೆ ತೆರಳುತ್ತಿದ್ದ ಆರನೇ ತರಗತಿಯ ವಿದ್ಯಾರ್ಥಿನಿಯನ್ನು ಮಹಿಳೆಯೊಬ್ಬರು ತಳ್ಳಿದ ಪರಿಣಾಮ ಬಾಲಕಿಯ ಬಲಗೈ ಮೂಳೆ ಮುರಿದಿರುವ ಘಟನೆ ವರದಿಯಾಗಿದೆ.

ಈ ಸಂಬಂಧ ಕುಂಬಳೆ ಪೊಲೀಸರು ಆರೋಪಿತ ಮಹಿಳೆ ವಿರುದ್ಧ ಜಾಮೀನು ರಹಿತ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ತನಿಖೆ ಚುರುಕುಗೊಳಿಸಿದ್ದಾರೆ.
ಶುಕ್ರವಾರ ಸಂಜೆ ಶಾಲೆ ಮುಗಿಸಿ ಕಣಿಪುರ ದೇವಸ್ಥಾನದ ಸಮೀಪವಿರುವ ಶಿಕ್ಷಕಿಯ ಮನೆಗೆ ಟ್ಯೂಷನ್ಗೆ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಾರಿಯಲ್ಲಿ ಬಾಲಕಿಯನ್ನು ತಡೆದ ಮಹಿಳೆ, “ನೀವು ಟ್ಯೂಷನ್ಗೆ ಹೋಗಬಾರದು. ಹೋದರೆ ಕಾಲು ಮುರಿಯುತ್ತೇನೆ” ಎಂದು ಬೆದರಿಕೆ ಹಾಕಿದ ಬಳಿಕ ಬಲವಾಗಿ ತಳ್ಳಿದ್ದಾಳೆ ಎನ್ನಲಾಗಿದೆ.

ತಳ್ಳಿದ ಪರಿಣಾಮ ಬಾಲಕಿ ಸಮೀಪದ ಗೇಟ್ಗೆ ಬಿದ್ದು, ಬಲಗೈ ಮೂಳೆ ಮುರಿದಿದೆ. ಗಾಯಗೊಂಡ ವಿದ್ಯಾರ್ಥಿನಿಗೆ ಚಿಕಿತ್ಸೆ ನೀಡಲಾಗಿದೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಶಿಕ್ಷಕಿಯೊಂದಿಗೆ ವೈಯಕ್ತಿಕ ದ್ವೇಷ ಹೊಂದಿದ್ದ ಮಹಿಳೆ, ಬಾಲಕಿ ಶಿಕ್ಷಕಿಯ ಮನೆಗೆ ಟ್ಯೂಷನ್ಗೆ ಹೋಗುತ್ತಿರುವುದನ್ನು ವಿರೋಧಿಸಿ ಈ ಕೃತ್ಯ ಎಸಗಿದ್ದಾಳೆ ಎಂದು ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಕುಂಬಳೆ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದಾರೆ.


