ಅಂತಾರಾಷ್ಟ್ರೀಯ ಯೋಗರತ್ನ ನಾಗರತ್ನ ಎಸ್. ಹಿರೇಮಠ ಅವರಿಗೆ “ಕನ್ನಡ ಪಯಸ್ವಿನಿ ಯೋಗರತ್ನ ಅಚೀವ್ಮೆಂಟ್ ಅವಾರ್ಡ್–2026”

ಕಾಸರಗೋಡು, ಜು. 12: ಕನ್ನಡಪರ ಹೋರಾಟಗಾರ್ತಿ, ಕವಯತ್ರಿ, ಲೇಖಕಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕಗಳನ್ನು ಪಡೆದಿರುವ ಯೋಗರತ್ನ ನಾಗರತ್ನ ಎಸ್. ಹಿರೇಮಠ ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ “ಕನ್ನಡ ಪಯಸ್ವಿನಿ ಯೋಗರತ್ನ ಅಚೀವ್ಮೆಂಟ್ ಅವಾರ್ಡ್–2026” ಘೋಷಿಸಲಾಗಿದೆ.

ಬೆಂಗಳೂರು ಪದ್ಮನಾಭನಗರ ನಿವಾಸಿಯಾಗಿರುವ ನಾಗರತ್ನ ಎಸ್. ಹಿರೇಮಠ ಅವರು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷೆಯಾಗಿ, ಕನ್ನಡ ಜಾನಪದ ಪರಿಷತ್ ಮಹಿಳಾ ಅಧ್ಯಕ್ಷೆಯಾಗಿ ಹಾಗೂ ಪದ್ಮನಾಭನಗರ ಶರಣ ಸಾಹಿತ್ಯ ಮಹಿಳಾ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದಾರೆ.

ಯೋಗ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸಿ ರಾಜ್ಯಕ್ಕೆ ಕೀರ್ತಿ ತಂದಿರುವ ಅವರು, ಕವಿ ಹಾಗೂ ಲೇಖಕಿಯಾಗಿಯೂ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದ ಬೆಳವಣಿಗೆ ಮತ್ತು ಸಾಮಾಜಿಕ ಸೇವೆಯಲ್ಲಿ ಸಲ್ಲಿಸಿರುವ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಡಾ. ಕೆ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿನಾಡು ಕಾಸರಗೋಡಿನ ಖ್ಯಾತ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಅಂಗವಾಗಿ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ನಾಗರತ್ನ ಎಸ್. ಹಿರೇಮಠ ಅವರಿಗೆ “ಕನ್ನಡ ಪಯಸ್ವಿನಿ ಯೋಗರತ್ನ ಅಚೀವ್ಮೆಂಟ್ ಅವಾರ್ಡ್–2026” ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!