ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಜತೆ ತುಂಬೆ ಗ್ರೂಪ್ ಒಪ್ಪಂದಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಶಿಕ್ಷಣಕ್ಕೆ ಹೊಸ ಅಧ್ಯಾಯ

ಅಜ್ಮಾನ್: ಸ್ವಿಟ್ಸರ್‌ಲ್ಯಾಂಡ್‌ನ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ (GCLS) ಹಾಗೂ ತುಂಬೆ ಗ್ರೂಪ್ ನಡುವೆ ತಿಳುವಳಿಕೆ ಒಪ್ಪಂದ (MoU)ಕ್ಕೆ ಸಹಿ ಹಾಕಲಾಗಿದ್ದು, ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನಲ್ಲಿ ಲಾಂಗ್ವಿಟಿ ವೈದ್ಯಕೀಯ, ಆರೋಗ್ಯಕರ ವಯಸ್ಸಾಗುವಿಕೆ, ತಡೆಗಟ್ಟುವ ಆರೋಗ್ಯ ಸೇವೆ ಹಾಗೂ ಪ್ರಿಸಿಷನ್ ಹೆಲ್ತ್ ಕ್ಷೇತ್ರಗಳಲ್ಲಿ ರಚನಾತ್ಮಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಈ ಒಪ್ಪಂದದಡಿ ಹೊಸದಾಗಿ ಸ್ಥಾಪನೆಯಾಗಿರುವ ತುಂಬೆ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವಿಟಿ ಮೆಡಿಸಿನ್ ಮೂಲಕ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (GMU) ತರಬೇತಿ ಕಾರ್ಯಕ್ರಮಗಳನ್ನು ನಡೆಸಲಿದ್ದು, ಯುಎಇಯಲ್ಲಿ ಲಾಂಗ್ವಿಟಿ ವೈದ್ಯಕೀಯ ಶಿಕ್ಷಣವನ್ನು ವ್ಯವಸ್ಥಿತವಾಗಿ ಪರಿಚಯಿಸಿದ ಮೊದಲ ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

ಈ ಸಹಭಾಗಿತ್ವದ ಮೂಲಕ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಶೈಕ್ಷಣಿಕ ಪರಿಣತಿ, ತುಂಬೆ ಹೆಲ್ತ್‌ಕೇರ್‌ನ ಕ್ಲಿನಿಕಲ್ ಜಾಲ ಹಾಗೂ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಅಂತರರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಸಾಮರ್ಥ್ಯ ಒಗ್ಗೂಡಲಿದ್ದು, ಮಧ್ಯಪ್ರಾಚ್ಯದಲ್ಲಿ ಲಾಂಗ್ವಿಟಿ ಶಿಕ್ಷಣ, ಸಂಶೋಧನೆ, ವೈದ್ಯಕೀಯ ನಾವೀನ್ಯತೆ ಹಾಗೂ ವೃತ್ತಿಪರ ಅಭಿವೃದ್ಧಿಗೆ ಹೊಸ ಉತ್ತೇಜನ ದೊರೆಯಲಿದೆ. ಅಲ್ಲದೆ, ಯುಎಇ ಹಾಗೂ ಜಿಸಿಸಿ ರಾಷ್ಟ್ರಗಳನ್ನು ಲಾಂಗ್ವಿಟಿ ವೈದ್ಯಕೀಯ ಕ್ಷೇತ್ರದ ಪ್ರಮುಖ ಕೇಂದ್ರಗಳನ್ನಾಗಿ ರೂಪಿಸುವ ಗುರಿಯನ್ನೂ ಈ ಸಹಯೋಗ ಹೊಂದಿದೆ.

ಒಪ್ಪಂದದ ಭಾಗವಾಗಿ ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನ ಶೈಕ್ಷಣಿಕ ಸಹಭಾಗಿತ್ವದಲ್ಲಿ ಆರು ಅಂತರರಾಷ್ಟ್ರೀಯ ವೃತ್ತಿಪರ ಪ್ರಮಾಣಪತ್ರ (ಸರ್ಟಿಫಿಕೇಟ್) ಕೋರ್ಸ್‌ಗಳನ್ನು ಆರಂಭಿಸಲಾಗುತ್ತಿದೆ. ಮೂರು ತಿಂಗಳ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿರುವ ಈ ಕೋರ್ಸ್‌ಗಳಿಗೆ ಆರಂಭಿಕ ಹಂತದಲ್ಲಿ ತಲಾ 100 ಮಂದಿಗೆ ಪ್ರವೇಶ ನೀಡಲಾಗುತ್ತದೆ.

ಕ್ಲಿನಿಕಲ್ ಲಾಂಗ್ವಿಟಿ ಮೆಡಿಸಿನ್, ಲಾಂಗ್ವಿಟಿ ಫಿಸಿಯೋಥೆರಪಿ, ಲಾಂಗ್ವಿಟಿ ಪೋಷಣೆ, ಲಾಂಗ್ವಿಟಿ ಫಿಟ್‌ನೆಸ್, ಪೆಪ್ಟೈಡ್ ಮೆಡಿಸಿನ್ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (AI) ವಿಷಯಗಳಲ್ಲಿ ವೃತ್ತಿಪರ ಪ್ರಮಾಣಪತ್ರ ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ವೈದ್ಯರು, ಔಷಧ ತಜ್ಞರು, ದಾದಿಯರು, ಭೌತಚಿಕಿತ್ಸಕರು, ಪೌಷ್ಟಿಕ ತಜ್ಞರು, ಫಿಟ್‌ನೆಸ್ ವೃತ್ತಿಪರರು ಸೇರಿದಂತೆ ಆರೋಗ್ಯ ಕ್ಷೇತ್ರದ ಪರಿಣಿತರನ್ನು ಗಮನದಲ್ಲಿಟ್ಟುಕೊಂಡು ಪಠ್ಯಕ್ರಮ ರೂಪಿಸಲಾಗಿದೆ.

ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ರೂಪಿಸಿರುವ ಅಂತರರಾಷ್ಟ್ರೀಯ ಗುಣಮಟ್ಟದ ಪಠ್ಯಕ್ರಮದಡಿ ಅಂತರರಾಷ್ಟ್ರೀಯ ಅಧ್ಯಾಪಕರು ಹಾಗೂ ಪ್ರಾದೇಶಿಕ ಕ್ಲಿನಿಕಲ್ ತಜ್ಞರು ತರಬೇತಿ ನೀಡಲಿದ್ದು, ಲಾಂಗ್ವಿಟಿ ವಿಜ್ಞಾನದಲ್ಲಿ ಉನ್ನತ ಅಧ್ಯಯನಕ್ಕೂ ಅವಕಾಶ ಕಲ್ಪಿಸಲಾಗುತ್ತದೆ.

2026ರಲ್ಲಿ ಜಿನೀವಾ ಕಾಲೇಜ್ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಶೇ.99ರಷ್ಟು ವೈದ್ಯರು ಲಾಂಗ್ವಿಟಿ ವೈದ್ಯಕೀಯ ಸೇವೆಗಳ ಬೇಡಿಕೆ ಹೆಚ್ಚುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದು, ಶೇ.83ರಷ್ಟು ಮಂದಿ ಆರೋಗ್ಯ ಸೇವೆಗಳು ತಡೆಗಟ್ಟುವ ವೈದ್ಯಕೀಯದತ್ತ ವೇಗವಾಗಿ ಸಾಗಲಿವೆ ಎಂದು ತಿಳಿಸಿದ್ದಾರೆ. ಮುಂದಿನ ಎರಡು ದಶಕಗಳಲ್ಲಿ ಮಾನವರ ಜೀವಿತಾವಧಿ ಗಣನೀಯವಾಗಿ ಹೆಚ್ಚುವ ಸಾಧ್ಯತೆಯಿದೆ ಎಂಬ ವಿಶ್ವಾಸವನ್ನೂ ಬಹುತೇಕ ವೈದ್ಯರು ವ್ಯಕ್ತಪಡಿಸಿದ್ದಾರೆ.

ತುಂಬೆ ಗ್ರೂಪ್‌ನ ಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ಲಿನ್ ಮಾತನಾಡಿ, “ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್‌ನೊಂದಿಗೆ ಕೈಜೋಡಿಸುವ ಮೂಲಕ ವಿಶ್ವದರ್ಜೆಯ ಸ್ವಿಸ್ ಶೈಕ್ಷಣಿಕ ಮಾನದಂಡಗಳನ್ನು ಯುಎಇಗೆ ತರುತ್ತಿದ್ದೇವೆ. ಗಲ್ಫ್ ಪ್ರದೇಶದ ಆರೋಗ್ಯ ವೃತ್ತಿಪರರಿಗೆ ಈ ಉದಯೋನ್ಮುಖ ಕ್ಷೇತ್ರದಲ್ಲಿ ಅಗತ್ಯ ಕೌಶಲ್ಯ ಮತ್ತು ತರಬೇತಿ ನೀಡುವುದು ನಮ್ಮ ಉದ್ದೇಶ” ಎಂದು ಹೇಳಿದರು.

ಜಿನೀವಾ ಕಾಲೇಜ್ ಆಫ್ ಲಾಂಗ್ವಿಟಿ ಸೈನ್ಸ್ ಅಧ್ಯಕ್ಷ ಡಾ. ಡೊಮಿನಿಕ್ ಥಾರ್ ಮಾತನಾಡಿ, “ಲಾಂಗ್ವಿಟಿ ವೈದ್ಯಕೀಯವು ಆಧುನಿಕ ಆರೋಗ್ಯ ಸೇವೆಯ ಪ್ರಮುಖ ಅಂಗವಾಗುತ್ತಿದೆ. ಗುಣಮಟ್ಟದ ಶಿಕ್ಷಣ, ಕ್ಲಿನಿಕಲ್ ಮಾನದಂಡಗಳು ಮತ್ತು ವಿಶ್ವಾಸಾರ್ಹ ತರಬೇತಿ ವ್ಯವಸ್ಥೆಯನ್ನು ರೂಪಿಸಲು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯೊಂದಿಗೆ ಕೈಜೋಡಿಸಿರುವುದು ಮಹತ್ವದ ಹೆಜ್ಜೆಯಾಗಿದೆ” ಎಂದು ತಿಳಿಸಿದರು.

2026-27ನೇ ಶೈಕ್ಷಣಿಕ ವರ್ಷದ ಸೆಪ್ಟೆಂಬರ್–ಅಕ್ಟೋಬರ್ ಪ್ರವೇಶಕ್ಕಾಗಿ ಅರ್ಜಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ಮೊದಲ ಬ್ಯಾಚ್‌ಗೆ 50ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಸಂಸ್ಥೆ ತಿಳಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!