ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಸಿರೋಡು ಸರ್ಕಲ್ ಸಮೀಪ ರಸ್ತೆ ಬದಿಯಲ್ಲಿ ಮೃತಪಟ್ಟ ಹಾವಿನ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಐವರು ಅಪರಿಚಿತರು ಮುಂದಾಗಿದ್ದರೆಂಬ ಘಟನೆ ಸೋಮವಾರ ಗಮನ ಸೆಳೆಯಿತು. ಘಟನೆಯು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಸ್ಥಳೀಯರ ಮಾಹಿತಿ ಪ್ರಕಾರ, ತಮ್ಮನ್ನು ಮೂಡುಶೆಡ್ಡೆ ನಿವಾಸಿಗಳು ಎಂದು ಪರಿಚಯಿಸಿಕೊಂಡಿದ್ದ ಕೆಲವರು, ಜೆಸಿಬಿ ಕಾಮಗಾರಿ ವೇಳೆ ಹಾವು ಸಾವನ್ನಪ್ಪಿದೆ ಎಂದು ಹೇಳಿಕೊಂಡು, ಬಿಳಿ ಬಟ್ಟೆಯಲ್ಲಿ ಹಾವನ್ನು ಇರಿಸಿ ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. ಹಾವಿನ ಅಂತ್ಯಕ್ರಿಯೆಯನ್ನು ಕುಡುಪು ದೇವಸ್ಥಾನದಲ್ಲಿ ನೆರವೇರಿಸಲಾಗುವುದು ಎಂದು ಅವರು ಹೇಳಿಕೊಂಡಿದ್ದಾರೆಯಾದರೂ, ಈ ಮಾಹಿತಿಗೆ ಯಾವುದೇ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ.

ಆರಂಭದಲ್ಲಿ ಹಾವನ್ನು ಬಿಸಿರೋಡು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ಇರಿಸಲಾಗಿತ್ತು. ಸಂಚಾರ ಸುರಕ್ಷತೆಯ ದೃಷ್ಟಿಯಿಂದ ಟ್ರಾಫಿಕ್ ಸಿಬ್ಬಂದಿ ಅದನ್ನು ರಸ್ತೆಯಿಂದ ತೆರವುಗೊಳಿಸುವಂತೆ ಸೂಚಿಸಿದ್ದು, ಈ ವೇಳೆ ಕೆಲಕಾಲ ಮಾತಿನ ಚಕಮಕಿ ನಡೆದಿತ್ತೆಂದು ಸ್ಥಳೀಯರು ತಿಳಿಸಿದ್ದಾರೆ. ಬಳಿಕ ಮಾಹಿತಿ ಪಡೆದ ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಬದಿಯಲ್ಲಿದ್ದ ಗುಂಪನ್ನು ಅಲ್ಲಿಂದ ತೆರಳುವಂತೆ ಸೂಚಿಸಿ ಸ್ಥಳವನ್ನು ತೆರವುಗೊಳಿಸಿದರು.

ಈ ಘಟನೆಯಲ್ಲಿ ಹಾವು ನಿಜವಾಗಿಯೂ ಅಪಘಾತದಲ್ಲಿ ಸಾವನ್ನಪ್ಪಿತ್ತೇ ಅಥವಾ ಅದರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಯತ್ನ ನಡೆದಿತ್ತೇ ಎಂಬುದು ಇನ್ನೂ ಅಧಿಕೃತವಾಗಿ ದೃಢಪಟ್ಟಿಲ್ಲ. ಸಂಬಂಧಿತ ಅಧಿಕಾರಿಗಳ ಪರಿಶೀಲನೆಯ ಬಳಿಕವೇ ಘಟನೆಯ ನಿಖರ ಸತ್ಯಾಂಶ ತಿಳಿಯಬೇಕಿದೆ. ಸಾರ್ವಜನಿಕರು ಇಂತಹ ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ವದಂತಿಗಳಿಗೆ ಕಿವಿಗೊಡದೆ ತಕ್ಷಣವೇ ಪೊಲೀಸ್ ಅಥವಾ ಅರಣ್ಯ ಇಲಾಖೆಗೆ ಮಾಹಿತಿ ನೀಡುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.

