ಸುಬ್ರಹ್ಮಣ್ಯ: ರಾಜ್ಯ ಸರ್ಕಾರದ ಮಾಜಿ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ರೇವಣ್ಣ ಅವರು ಸೋಮವಾರ (ಜುಲೈ 13) ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಕ್ಷೇತ್ರಕ್ಕೆ ಆಗಮಿಸಿದ ಮಾಜಿ ಸಚಿವರನ್ನು ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಅವರು ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ದೇವರ ದರ್ಶನ ಪಡೆದ ರೇವಣ್ಣ ಅವರು, ಸ್ವಾಮಿಗೆ ನಡೆದ ಪಂಚಾಮೃತ ಮಹಾಭಿಷೇಕ ಸೇವೆಯಲ್ಲಿ ಪಾಲ್ಗೊಂಡರು. ಮಹಾಮಂಗಳಾರತಿ ವೀಕ್ಷಿಸಿ, ತೀರ್ಥಪ್ರಸಾದ ಸ್ವೀಕರಿಸಿದ ನಂತರ ದೇವಳದ ಭೋಜನಪ್ರಸಾದ ಸವಿದರು.

ಸುಬ್ರಹ್ಮಣ್ಯ ಮಠಕ್ಕೆ ಭೇಟಿ-ಆಶೀರ್ವಾದ:
ದೇವಸ್ಥಾನದ ದರ್ಶನದ ಬಳಿಕ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಸಮೀಪದ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿದರು. ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಸ್ವಾಮೀಜಿಯವರು ರೇವಣ್ಣ ಅವರಿಗೆ ಶಾಲು ಹೊದಿಸಿ, ಮಂತ್ರಾಕ್ಷತೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ದ.ಕ. ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಪ್ರಿಯಾ ಸಾಲಿಯನ್, ಜೆಡಿಎಸ್ ಮುಖಂಡರಾದ ದಿವಾಕರ ಬೆಂಗಳೂರು, ಜಯಂತ ಪಂಬತ್ತಾಡಿ ಹಾಗೂ ಬಿಜೆಪಿ ಮುಖಂಡ ಸಂತೋಷ್ ಜಾಕೆ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.


