ಎಸ್‌ಐಆರ್ ಪರಿಷ್ಕರಣೆ: ದಕ್ಷಿಣ ಕನ್ನಡದ ಮತದಾರರಿಗೆ ಜಿಲ್ಲಾಧಿಕಾರಿ ದರ್ಶನ್ ತುರ್ತು ಮನವಿ

ಮಂಗಳೂರ: ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಕಾರ್ಯದಲ್ಲಿ ಸಾರ್ವಜನಿಕರು ಸಕ್ರಿಯವಾಗಿ ಭಾಗವಹಿಸುವಂತೆ ದ. ಕ ಜಿಲ್ಲಾಧಿಕಾರಿ ದರ್ಶನ್ ಮನವಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 18,03,766 ಮತದಾರರಿದ್ದು, ಅವರ ಪೈಕಿ 17,75,811 (98.45%) ಮಂದಿಗೆ ಬೂತ್ ಮಟ್ಟದ ಅಧಿಕಾರಿಗಳು (BLO) ಮನೆ-ಮನೆಗೆ ತೆರಳಿ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿದ್ದಾರೆ. ಆದರೆ, ಇದುವರೆಗೆ ಕೇವಲ 2,13,939 (11.86%) ಮತದಾರರು ಮಾತ್ರ ಭರ್ತಿ ಮಾಡಿದ ಫಾರಂಗಳನ್ನು ಹಿಂತಿರುಗಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಭರ್ತಿ ಮಾಡಿದ ಫಾರಂಗಳನ್ನು ಡಿಜಿಟೈಸ್ ಮಾಡಲು ಜುಲೈ 29, 2026 ಕೊನೆಯ ದಿನವಾಗಿರುವುದರಿಂದ, ಮತದಾರರು ಕೊನೆಯ ಕ್ಷಣದವರೆಗೆ ಕಾಯದೆ ಇದೇ ವಾರದಲ್ಲಿ ತಮ್ಮ ಫಾರಂಗಳನ್ನು ಸಂಬಂಧಿತ ಬಿಎಲ್‌ಒಗಳಿಗೆ ಸಲ್ಲಿಸುವಂತೆ ಅವರು ಮನವಿ ಮಾಡಿದ್ದಾರೆ.

ಲಕ್ಷಾಂತರ ಫಾರಂಗಳನ್ನು ಆಪ್ ಮೂಲಕ ಡಿಜಿಟೈಸ್ ಮಾಡಲು ಬಿಎಲ್‌ಒಗಳಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಹೀಗಾಗಿ ಜುಲೈ 27 ಅಥವಾ 28ರವರೆಗೆ ಕಾಯದೆ ಶೀಘ್ರದಲ್ಲೇ ಫಾರಂಗಳನ್ನು ಸಲ್ಲಿಸುವುದು ಅಗತ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಜುಲೈ 29ರೊಳಗೆ ಡಿಜಿಟೈಸ್ ಆಗುವ ಫಾರಂ ಹೊಂದಿರುವ ಮತದಾರರ ಹೆಸರುಗಳು ಮಾತ್ರ ಮುಂದಿನ ಕರಡು ಮತದಾರರ ಪಟ್ಟಿಯಲ್ಲಿ ಪ್ರಕಟವಾಗಲಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಫಾರಂ ಭರ್ತಿ ಮಾಡುವಲ್ಲಿ ಯಾವುದೇ ಗೊಂದಲ ಅಥವಾ ನೆರವು ಬೇಕಾದರೆ, ಪ್ರತಿ ಮತಗಟ್ಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತದಾರರ ಅನುಕೂಲ ಕೇಂದ್ರಗಳಿಗೆ (Voter Facilitation Centers) ಭೇಟಿ ನೀಡಿ ಅಧಿಕಾರಿಗಳ ಸಹಾಯ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!