ಕಾಸರಗೋಡು: ಮಂಜೇಶ್ವರ ಗೋವಿಂದ ಪೈ ಮೆಮೋರಿಯಲ್ ಸರ್ಕಾರಿ ಕಾಲೇಜಿನಲ್ಲಿ ವಿಶ್ವ ಜನಸಂಖ್ಯಾ ದಿನದ ಜಿಲ್ಲಾ ಮಟ್ಟದ ಉದ್ಘಾಟನಾ ಸಮಾರಂಭ ನಡೆಯಿತು.


ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಯು.ಕೆ. ಸೈಫುಲ್ಲ ತಂಗಳ್ ಕಾರ್ಯಕ್ರಮ ಉದ್ಘಾಟಿಸಿದರು. ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಬಶೀರ್ ಕನಿಲ ಅಧ್ಯಕ್ಷತೆ ವಹಿಸಿದ್ದರು.
ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಧ್ಯೇಯವಾಕ್ಯ ‘ಪ್ರಸವಗಳ ನಡುವೆ ಸಮರ್ಪಕ ಅಂತರವು ತಾಯಿ ಮತ್ತು ಶಿಶುವಿನ ಆರೋಗ್ಯಕ್ಕೆ ಅಗತ್ಯ’ ಎಂಬುದಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಸಂತೋಷ್ ಬಿ. ಮುಖ್ಯ ಭಾಷಣ ಮಾಡಿದರು. ಬಳಿಕ ನಡೆದ ಜಾಗೃತಿ ಸೆಮಿನಾರ್ನಲ್ಲಿ ಡಾ. ಪ್ರಭಾಕರ ರೈ ತರಗತಿ ನಡೆಸಿದರು.

ಕಾಸರಗೋಡು ಜಿಲ್ಲಾ ವೈದ್ಯಕೀಯ ಕಚೇರಿ, ರಾಷ್ಟ್ರೀಯ ಆರೋಗ್ಯ ಮಿಷನ್ ಮತ್ತು ಕಾಲೇಜಿನ ಮಹಿಳಾ ಸೆಲ್ ಹಾಗೂ ಎನ್.ಎಸ್.ಎಸ್ ಘಟಕಗಳ ಸಹಯೋಗದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಭಾರತವು ಜನಸಂಖ್ಯಾ ಸ್ಥಿರತೆಯತ್ತ ಸಾಗುತ್ತಿದ್ದು, ಪ್ರಸಕ್ತ ಸಂದರ್ಭದಲ್ಲಿ ತಾಯಿ ಮತ್ತು ಶಿಶುವಿನ ಆರೋಗ್ಯದ ಬಗ್ಗೆ ಹಾಗೂ ಅನಾವಶ್ಯಕ ಗರ್ಭಧಾರಣೆಯನ್ನು ತಡೆಗಟ್ಟುವ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಜಿಲ್ಲಾ ವೈದ್ಯಕೀಯ ಅಧಿಕಾರಿ (ಆರೋಗ್ಯ) ಡಾ. ರೇಖಾ ಕೆ.ಟಿ. ತಿಳಿಸಿದ್ದಾರೆ. ಜಿಲ್ಲೆಯ ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

