ಮಂಗಳೂರು, ಜು. 15:“ನಾವು ನಮ್ಮ ಕುಲದೇವರು, ಗ್ರಾಮದೇವರು ಹಾಗೂ ಇಷ್ಟದೇವರನ್ನು ಹೇಗೆ ಭಕ್ತಿ-ಶ್ರದ್ಧೆಯಿಂದ ಆರಾಧಿಸುತ್ತೇವೆಯೋ, ಅದೇ ರೀತಿಯಲ್ಲಿ ಸಮಾಜದಿಂದ ಆರಾಧಿಸಲ್ಪಡುವ ಅಪರೂಪದ ಕುಟುಂಬ ಪಣಂಬೂರಿನ ಪಿ.ವಿ. ಐತಾಳರದ್ದು. ಭಾಷೆಯ ಎಲ್ಲೆಗಳನ್ನು ಮೀರಿ ಆಂಗ್ಲ ಭಾಷೆಯ ಯಕ್ಷಗಾನವನ್ನು ಬೆಳೆಸಿದ ಈ ಕುಟುಂಬದ ಸೇವೆ ಅನನ್ಯವಾಗಿದೆ” ಎಂದು ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಕಮಲಾದೇವಿ ಪ್ರಸಾದ ಆಸ್ರಣ್ಣ ಹೇಳಿದರು.


ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಮರಮಣ ವೇದಿಕೆಯಲ್ಲಿ ನಡೆದ ಯಕ್ಷನಂದನದ 45ನೇ ವರ್ಷದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, “ಆಂಗ್ಲ ಭಾಷಾ ಯಕ್ಷಗಾನ ಇಂದು ಐವತ್ತರ ಸನಿಹ ತಲುಪಿರುವುದು ಪಿ.ವಿ. ಐತಾಳರ ದೂರದೃಷ್ಟಿ ಮತ್ತು ಪರಿಶ್ರಮದ ಫಲ. ಅವರು ಸ್ಥಾಪಿಸಿದ ಈ ಸಂಸ್ಥೆ ಯಾವುದೇ ಅಡೆತಡೆಗಳಿಲ್ಲದೆ ಮುಂದಿನ ತಲೆಮಾರುಗಳಿಗೂ ಬೆಳೆಯಲಿ. ಶ್ರೀ ನಂದನೇಶ್ವರನ ಅನುಗ್ರಹ ಸದಾ ಈ ಸಂಸ್ಥೆಯ ಮೇಲಿರಲಿ” ಎಂದು ಹಾರೈಸಿದರು.


ಯಕ್ಷಗಾನ ವಿದ್ವಾಂಸ ಡಾ. ಜೋಶಿ ಮಾತನಾಡಿ, “ಯಕ್ಷನಂದನದ ಆರಂಭಿಕ ದಿನಗಳಿಂದಲೇ ದಿವಂಗತ ಪಿ.ವಿ. ಐತಾಳರೊಂದಿಗೆ ನಮ್ಮೆಲ್ಲರಿಗೂ ಆತ್ಮೀಯ ಒಡನಾಟವಿತ್ತು. ಅವರು ಅಂದು ಹಾಕಿದ ಭದ್ರ ಬುನಾದಿಯೇ ಇಂದು ಸಂಸ್ಥೆಯ ಯಶಸ್ಸಿಗೆ ಕಾರಣವಾಗಿದೆ” ಎಂದು ಅಭಿಪ್ರಾಯಪಟ್ಟರು.


ರೋಟರಿ ಮಾಜಿ ಜಿಲ್ಲಾ ಗವರ್ನರ್ (PDG) ಎನ್. ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಯಕ್ಷನಂದನದ ಅಧಿಕೃತ ವೆಬ್‌ಸೈಟ್ ಅನ್ನು ಮನ್ವಿತ್ ಬಿ. ಶೆಟ್ಟಿ ಅವರ ನಿರ್ವಹಣೆಯಲ್ಲಿ ಅನಾವರಣಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಧಾನ ಸಂಚಾಲಕ ಸಂತೋಷ್ ಐತಾಳ ಕುಳಾಯಿ ಪ್ರಸ್ತಾವನೆ ಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ. ಪಿ. ಸತ್ಯಮೂರ್ತಿ ಐತಾಳ ಸ್ವಾಗತಿಸಿದರು. ಪಿ. ಸುರೇಶ್ ಐತಾಳ ವಂದಿಸಿದರು. ಯಕ್ಷನಂದನದ ಮಾರ್ಗದರ್ಶಕರಾದ ಪ್ರೊ. ಎಂ.ಎಲ್. ಸಾಮಗ ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ಬಳಿಕ ಪಿ.ವಿ. ಐತಾಳ ಅವರು ಸಂಭಾಷಣೆ ರಚಿಸಿದ ‘ನರಕಾಸುರ ಮೋಕ್ಷ’ ಹಾಗೂ ‘ಬ್ರಹ್ಮಕಪಾಲ’ ಎಂಬ ಎರಡು ಯಕ್ಷಗಾನ ಪ್ರಸಂಗಗಳನ್ನು ಕಾಲಮಿತಿಯಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

