ಮಂಗಳೂರು-ಕುಳಾಯಿಯಲ್ಲಿ ಭವ್ಯ ಶ್ರೀ ಜಗನ್ನಾಥ ರಥಯಾತ್ರೆ

ಮಂಗಳೂರು:ಅಂತರಾಷ್ಟ್ರೀಯ ಕೃಷ್ಣ ಪ್ರಜ್ಞಾ ಸಂಘ (ಇಸ್ಕಾನ್) ಮಂಗಳೂರು-ಕುಳಾಯಿ ವತಿಯಿಂದ ವಾರ್ಷಿಕ ಶ್ರೀ ಜಗನ್ನಾಥ ರಥಯಾತ್ರೆ ಗುರುವಾರ ಭಕ್ತಿಭಾವ ಹಾಗೂ ವೈಭವದಿಂದ ನಡೆಯಲಿದೆ ಎಂದು ಇಸ್ಕಾನ್‌ನ ಪೂಜ್ಯ ನಾಮ ನಿಷ್ಠ ದಾಸ ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವರ್ಷದ ರಥಯಾತ್ರೆಗೆ ದೊರೆತ ಅಭೂತಪೂರ್ವ ಸ್ಪಂದನೆಯ ಹಿನ್ನೆಲೆಯಲ್ಲಿ ಈ ಬಾರಿ ಇನ್ನಷ್ಟು ಭವ್ಯವಾಗಿ ಉತ್ಸವವನ್ನು ಆಯೋಜಿಸಲಾಗಿದೆ. ಮಂಗಳೂರು, ಸುರತ್ಕಲ್, ಉಡುಪಿ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.

ಶ್ರೀ ಜಗನ್ನಾಥ, ಶ್ರೀ ಬಲದೇವ ಹಾಗೂ ಶ್ರೀ ಸುಭದ್ರಾ ದೇವಿಯವರು ರಥಾರೂಢರಾಗಿ ಭಕ್ತರಿಗೆ ದರ್ಶನ ನೀಡಲಿದ್ದು, ಜಾತಿ, ಮತ, ಪಂಥ, ಭಾಷೆ ಹಾಗೂ ರಾಷ್ಟ್ರೀಯತೆಯ ಭೇದವಿಲ್ಲದೆ ಎಲ್ಲರನ್ನು ಭಗವಂತನ ಪ್ರೀತಿಯಡಿ ಒಗ್ಗೂಡಿಸುವ ಸಂದೇಶವನ್ನು ರಥಯಾತ್ರೆ ಸಾರಲಿದೆ ಎಂದು ತಿಳಿಸಿದರು.

ರಥಯಾತ್ರೆಯು ಸಂಜೆ 4 ಗಂಟೆಗೆ ಸುರತ್ಕಲ್ ಜಂಕ್ಷನ್‌ನಿಂದ ಆರಂಭವಾಗಿ ಇಸ್ಕಾನ್ ಮಂಗಳೂರು-ಕುಳಾಯಿ ದೇವಸ್ಥಾನಕ್ಕೆ ತಲುಪಲಿದೆ. ಬಳಿಕ ಸಂಜೆ 7ರಿಂದ ರಾತ್ರಿ 10 ಗಂಟೆಯವರೆಗೆ ಯಕ್ಷಗಾನ ಪ್ರದರ್ಶನ ನಡೆಯಲಿದ್ದು, ಭಕ್ತರು ಹಾಗೂ ಸಾರ್ವಜನಿಕರಿಗೆ ಉಚಿತ ಪ್ರಸಾದ ವಿತರಿಸಲಾಗುವುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಸ್ಕಾನ್ ಕುಳಾಯಿ ಪದಾಧಿಕಾರಿಗಳಾದ ಸರ್ವನಾಥ ದಾಸ ಹಾಗೂ ಶಿವಾಸ್ ದಾಸ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!