ಮಂಗಳೂರು: ಅಂಚೆ ಇಲಾಖೆಯಲ್ಲಿ ಸಿಬ್ಬಂದಿಯ ಮೇಲೆ ಟಾರ್ಗೆಟ್ ಹೆಸರಿನಲ್ಲಿ ಮಾನಸಿಕ ಒತ್ತಡ ಹೇರಿ, ಸ್ವಂತ ಹಣದಲ್ಲಿ ಖಾತೆ ತೆರೆಯುವಂತೆ ಒತ್ತಾಯಿಸಲಾಗುತ್ತಿದೆ. ಮೆಕಿನ್ಸಿ (McKinsey) ಸಲಹೆ ಮೇರೆಗೆ ಇಲಾಖೆಯನ್ನು ಖಾಸಗೀಕರಣದತ್ತ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಭಾರತೀಯ ಅಂಚೆ ನೌಕರರ ಒಕ್ಕೂಟ ರಾಷ್ಟ್ರವ್ಯಾಪಿ ಹೋರಾಟ ಹಾಗೂ ಮುಷ್ಕರಕ್ಕೆ ಕರೆ ನೀಡಿದೆ.

ನಗರದ ಪತ್ರಿಕಾಭವನದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಪದಾಧಿಕಾರಿ ದಯಾನಂದ ಕತ್ತಲ್ ಸಾರ್ , ಸರ್ಕಾರದ ಅವೈಜ್ಞಾನಿಕ ನೀತಿಗಳಿಂದ ಸಿಬ್ಬಂದಿ ಶೋಷಣೆಗೆ ಒಳಗಾಗುತ್ತಿದ್ದು, ಈ ಕ್ರಮವನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಜುಲೈ 20ರಿಂದ 27ರವರೆಗೆ ಕಪ್ಪು ಪಟ್ಟಿ ಧರಿಸಿ ಕರ್ತವ್ಯ ನಿರ್ವಹಣೆ, ಜುಲೈ 28ರಂದು ಪ್ರತಿಭಟನೆ, ಆಗಸ್ಟ್ 5ರಂದು ಒಂದು ದಿನದ ರಾಷ್ಟ್ರವ್ಯಾಪಿ ಮುಷ್ಕರ ಹಾಗೂ ಆಗಸ್ಟ್ 18ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದರು.

ಟಾರ್ಗೆಟ್ ಪದ್ಧತಿ ರದ್ದು, ಖಾಲಿ ಹುದ್ದೆಗಳ ಭರ್ತಿ, ರೈಲ್ವೆ ಅಂಚೆ ಸೇವೆ ಪುನರಾರಂಭ, ಭ್ರಷ್ಟಾಚಾರ ನಿಯಂತ್ರಣ, ಬಾಕಿ ಇರುವ ಬಡ್ತಿಗಳು ಹಾಗೂ ಕ್ಯಾಡರ್ ಪುನರ್ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಅಂಚೆ ನೌಕರರ ಸಂಘದ ವಲಯ ಕಾರ್ಯದರ್ಶಿ ವೀರೇಶ್ , ಸಂಘದ ಪದಾಧಿಕಾರಿಗಳಾದ ರವಿ ಚೌದ್ರಿ, ದೇವಪ್ಪ ಜಿ. ಮ್ಯಾಗೇರಿ, ಸಂತೋಷ್ ಬೂದಿ ಹಾಗೂ ಪ್ರಕಾಶ್ ಕರಡಿ ಉಪಸ್ಥಿತರಿದ್ದರು .

