ಮಂಗಳೂರು: ಕೃಷಿ ತಂತ್ರಜ್ಞರ ಸಂಸ್ಥೆ (ಐಎಟಿ) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಜಂಟಿ ಘಟಕದ (23ನೇ ಘಟಕ) ಉದ್ಘಾಟನಾ ಸಮಾರಂಭವು ಜುಲೈ 18ರಂದು ಬೆಳಿಗ್ಗೆ 10 ರಿಂದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ವಿಚಾರ ಸಂಕಿರಣ ಸಭಾಂಗಣದಲ್ಲಿ ನಡೆಯಲಿದೆ ಎಂದು ಐಎಟಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಡಾ. ಎಸ್.ಎಂ. ಶಿವಪ್ರಕಾಶ್ ತಿಳಿಸಿದರು.

ನಗರದ ಪತ್ರಿಕಾಭವನದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಘಟಕವನ್ನು ಉದ್ಘಾಟಿಸಲಿದ್ದು, ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ನಾಗೇಂದ್ರ ಮಹದೇವಪ್ಪ, ಕೆಸಿಡಿಸಿ ಅಧ್ಯಕ್ಷೆ ಮಮತಾ ಗಟ್ಟಿ, ಆಳ್ವಾಸ್ ಎಜುಕೇಶನ್ ಫೌಂಡೇಶನ್ನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಪ್ರಧಾನ ಕಚೇರಿ ಬೆಂಗಳೂರು ಅಧ್ಯಕ್ಷ ಡಾ. ಎ.ಬಿ. ಪಾಟೀಲ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಐಎಟಿ ಬೆಂಗಳೂರು ವ್ಯವಸ್ಥಾಪಕ ಸಮಿತಿ ಸದಸ್ಯ ಲೋಕೇಶ್ವರ್ ಹಾಗೂ ಬೋಳಾಸ್ ಆಗ್ರೋ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷ ರಾಹುಲ್ ಕಾಮತ್ ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು.
ಉದ್ಘಾಟನಾ ಸಮಾರಂಭದ ಬಳಿಕ “ಗೋಡಂಬಿ ಕೃಷಿ ತಂತ್ರಜ್ಞಾನದಲ್ಲಿನ ಸುಧಾರಣೆಗಳು ಹಾಗೂ ತೋಟದ ಬೆಳೆಗಳಿಗೆ ಪರ್ಯಾಯ ಗೊಬ್ಬರ ವ್ಯವಸ್ಥೆ” ಕುರಿತು ವಿಚಾರ ಸಂಕಿರಣ ಹಾಗೂ ತಾಂತ್ರಿಕ ಗೋಷ್ಠಿ ನಡೆಯಲಿದೆ. ಐಸಿಎಆರ್–ಗೋಡಂಬಿ ಸಂಶೋಧನಾ ನಿರ್ದೇಶಕ ಡಾ. ದಿನಕರ್ ಅಡಿಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು ಹಾಗೂ ರೈತರ ನಡುವೆ ಸಂವಾದ ಕಾರ್ಯಕ್ರಮವೂ ನಡೆಯಲಿದೆ.

ಕೃಷಿ ತಂತ್ರಜ್ಞರ ಸಂಸ್ಥೆಯು ರೈತರ ತಾಂತ್ರಿಕ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಒದಗಿಸುವುದು, ವಿಚಾರ ಸಂಕಿರಣ, ಗುಂಪು ಚರ್ಚೆ ಹಾಗೂ ಶೈಕ್ಷಣಿಕ ಪ್ರವಾಸಗಳ ಮೂಲಕ ನೂತನ ಕೃಷಿ ತಂತ್ರಜ್ಞಾನಗಳ ಪರಿಚಯ ಮಾಡಿಕೊಡುವುದು, ಕೃಷಿ ಪದವೀಧರರಿಗೆ ಉನ್ನತ ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ಕುರಿತು ಮಾರ್ಗದರ್ಶನ ನೀಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆಯ ಪ್ರಮುಖರಾದ ಡಾ. ಅರುಣ್ ಕುಮಾರ್ ಶೆಟ್ಟಿ, ಕೆ. ಪ್ರವೀಣ್ ಹಾಗೂ ಯತೀಶ್ ತುಕಾರಾಮ್ ಉಪಸ್ಥಿತರಿದ್ದರು.

