ಇಸ್ಲಾಮಾಬಾದ್: ಅಮೆರಿಕ–ಇರಾನ್ ಸಂಘರ್ಷ ನಿಯಂತ್ರಣ ಹಾಗೂ ಜಾಗತಿಕ ಪ್ರಮುಖ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯನ್ನು ಮರುಮುಕ್ತಗೊಳಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮತ್ತು ಇರಾನ್ ನಡುವೆ ನಡೆದ ಉನ್ನತ ಮಟ್ಟದ ಮಾತುಕತೆಯಲ್ಲಿ ಮಹತ್ವದ ಪ್ರಗತಿ ಸಾಧಿಸಲಾಗಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಹಾಗೂ ಗೃಹ ಸಚಿವ ಮೊಹ್ಸಿನ್ ನಖ್ವಿ ಅವರು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯನ್, ವಿದೇಶಾಂಗ ಸಚಿವ ಅಬ್ಬಾಸ್ ಅರಾಘ್ಚಿ ಸೇರಿದಂತೆ ಪ್ರಮುಖ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

ಸಂಘರ್ಷ ಮತ್ತಷ್ಟು ಉಲ್ಬಣಗೊಳ್ಳದಂತೆ ತಡೆಯುವುದು, ಸ್ಥಗಿತಗೊಂಡಿರುವ ಅಮೆರಿಕ–ಇರಾನ್ ಶಾಂತಿ ಮಾತುಕತೆ ಪುನರಾರಂಭಿಸುವುದು ಹಾಗೂ ಹಾರ್ಮುಜ್ ಜಲಸಂಧಿಯಲ್ಲಿ ಸಾಗಾಟ ಪುನಃ ಆರಂಭಿಸುವ ಕುರಿತು ಮಾತುಕತೆ ನಡೆದಿದೆ.
ಪಾಕಿಸ್ತಾನದ ಶಾಂತಿ ಪ್ರಯತ್ನಗಳನ್ನು ಇರಾನ್ ಶ್ಲಾಘಿಸಿದ್ದು, ವಿವಾದಗಳಿಗೆ ರಾಜತಾಂತ್ರಿಕ ಹಾಗೂ ಶಾಂತಿಯುತ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿಹೇಳಿದೆ.

ಇದೇ ವೇಳೆ, ಇರಾನ್ ವಿರುದ್ಧ ಅಮೆರಿಕ ಆರ್ಥಿಕ ಒತ್ತಡ ಹೆಚ್ಚಿಸಿದ್ದು, ನೆರವು ನೀಡುವ ದೇಶಗಳಿಗೂ ಪರಿಣಾಮ ಎದುರಾಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್–ಒಮಾನ್ ನಡುವಿನ ಸುಮಾರು 55 ಕಿ.ಮೀ. ಅಗಲದ ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಾಟದ ಪ್ರಮುಖ ಮಾರ್ಗವಾಗಿದ್ದು, ಇಲ್ಲಿ ಉಂಟಾಗಿರುವ ಅಡಚಣೆಯಿಂದ ತೈಲ ಬೆಲೆ ಏರಿಕೆಯ ಆತಂಕ ಹೆಚ್ಚಾಗಿದೆ.

