ದೇಶದ ಮೊದಲ ಹೈಡೋಜನ್ ಇಂಧನ ಚಾಲಿತ ರೈಲಿಗೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ದೇಶದ ಮೊದಲ ಹೈಡೋಜನ್ ಇಂಧನ ಚಾಲಿತ ಪ್ರಯಾಣಿಕರ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಚಾಲನೆ ನೀಡಿದರು. ಹರಿಯಾಣದ ಜಿಂದ್ ರೈಲು ನಿಲ್ದಾಣದಿಂದ ಆರಂಭವಾದ ‘ನಮೋ ಗ್ರೀನ್ ರೈಲ್’ ಸೋನಿಪತ್‌ವರೆಗೆ ಸುಮಾರು 89 ಕಿಲೋಮೀಟರ್ ದೂರ ಸಂಚರಿಸಲಿದೆ.

ಸಂಪೂರ್ಣವಾಗಿ ಭಾರತದಲ್ಲೇ ನಿರ್ಮಾಣಗೊಂಡಿರುವ ಈ ರೈಲು ಸೇವೆ ಆರಂಭಿಸುವ ಮೂಲಕ ವಿಶ್ವದ ಅತಿ ಉದ್ದದ ಬ್ರಾಡ್‌ಗೇಜ್ ಹೈಡೋಜನ್ ರೈಲು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತೀಯ ರೈಲ್ವೆಯನ್ನು ಇಂಗಾಲ ಮುಕ್ತಗೊಳಿಸುವ ಮಹತ್ವಾಕಾಂಕ್ಷಿ ಯೋಜನೆಯಡಿ ಇದನ್ನು ಪ್ರಮುಖ ಮೈಲಿಗಲ್ಲಾಗಿ ಪರಿಗಣಿಸಲಾಗಿದೆ.

ಸಾಂಪ್ರದಾಯಿಕ ಡೀಸೆಲ್ ಹಾಗೂ ವಿದ್ಯುತ್ ರೈಲುಗಳಿಗಿಂತ ಹೈಡೋಜನ್ ರೈಲು ವಿಭಿನ್ನ ತಂತ್ರಜ್ಞಾನವನ್ನು ಹೊಂದಿದೆ. ಸಾಮಾನ್ಯ ವಿದ್ಯುತ್ ರೈಲುಗಳಿಗೆ ಮೇಲ್ದಂಡೆಯ ವಿದ್ಯುತ್ ತಂತಿಗಳ ಅವಶ್ಯಕತೆ ಇದ್ದರೆ, ಹೈಡೋಜನ್ ಫ್ಯುಯೆಲ್ ಸೆಲ್ ರೈಲು ತನ್ನೊಳಗೇ ವಿದ್ಯುತ್ ಉತ್ಪಾದಿಸಿಕೊಂಡು ಸಂಚರಿಸುತ್ತದೆ.

ರೈಲಿನಲ್ಲಿ ಅಳವಡಿಸಿರುವ ಪ್ರೋಟಾನ್ ಎಕ್ಸ್‌ಚೇಂಜ್ ಮೆಂಬರೇನ್ (PEM) ಫ್ಯುಯೆಲ್ ಸೆಲ್ ಸಂಗ್ರಹಿತ ಹೈಡೋಜನ್ ಹಾಗೂ ವಾತಾವರಣದಲ್ಲಿನ ಆಮ್ಲಜನಕದ ನಡುವೆ ರಾಸಾಯನಿಕ ಕ್ರಿಯೆ ನಡೆಸಿ ವಿದ್ಯುತ್ ಉತ್ಪಾದಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನೀರಿನ ಆವಿ ಮತ್ತು ಶಾಖ ಮಾತ್ರ ಉಪ ಉತ್ಪನ್ನಗಳಾಗಿ ಹೊರಬರುವುದರಿಂದ ಯಾವುದೇ ಹಾನಿಕಾರಕ ಹೊಗೆ ಅಥವಾ ಕಾರ್ಬನ್ ಉತ್ಸರ್ಗ ಉಂಟಾಗುವುದಿಲ್ಲ.

ಶಕ್ತಿಯ ದೃಷ್ಟಿಯಿಂದಲೂ ಹೈಡೋಜನ್ ಇಂಧನ ಹೆಚ್ಚು ಪರಿಣಾಮಕಾರಿಯಾಗಿದೆ. ಒಂದು ಕಿಲೋಗ್ರಾಂ ಡೀಸೆಲ್ ಸುಮಾರು 43 ಮೆಗಾಜೌಲ್ (MJ) ಶಕ್ತಿ ನೀಡಿದರೆ, ಒಂದು ಕಿಲೋಗ್ರಾಂ ಹೈಡೋಜನ್ ಸುಮಾರು 120 ಮೆಗಾಜೌಲ್ (MJ) ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

ಮುಂದಿನ ದಿನಗಳಲ್ಲಿ ಕಲ್ಕಾ–ಶಿಮ್ಲಾ ಸೇರಿದಂತೆ ದೇಶದ ವಿವಿಧ ಹೆರಿಟೇಜ್ ರೈಲ್ವೆ ಮಾರ್ಗಗಳಲ್ಲೂ ಹೈಡೋಜನ್ ತಂತ್ರಜ್ಞಾನವನ್ನು ವಿಸ್ತರಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!