ಉಡುಪಿ : ರಾಜ್ಯ ಹಾಗೂ ರಾಷ್ಟ್ರದ ವಿವಿಧ ಸಮಕಾಲೀನ ವಿಚಾರಗಳ ಕುರಿತು ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರ ಜನರ ಸಮಸ್ಯೆಗಳ ಪರಿಹಾರಕ್ಕೆ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಸೋನಂ ವಾಂಗ್ಚು ಉಪವಾಸ ವಿಚಾರ ಕುರಿತು ಮಾತನಾಡಿದ ಅವರು, ಕೆಲ ಅತಿರೇಕ ಬುದ್ಧಿಜೀವಿಗಳು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿಯನ್ನು ಟೀಕಿಸುವುದನ್ನೇ ತಮ್ಮ ಕಾರ್ಯವಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಯಾರೇ ಉಪವಾಸ ನಡೆಸಿದರೂ ಅವರ ಸಮಸ್ಯೆಯನ್ನು ಸ್ಪಷ್ಟವಾಗಿ ತಿಳಿಸಬೇಕು. ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕ ಹಿತಾಸಕ್ತಿ ವಿಚಾರಗಳನ್ನು ಸಂಸತ್ತಿನಲ್ಲಿ ಚರ್ಚಿಸಲು ಅವಕಾಶವಿದೆ ಎಂದರು.

ಬಿಡದಿ ಭೂಸ್ವಾಧೀನ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ರೈತರು ಭೂಮಿ ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು, ಸರ್ಕಾರ ಅವರ ಭಾವನೆಗಳಿಗೆ ಗೌರವ ನೀಡಬೇಕು. ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡದಿದ್ದರೆ ಸರ್ಕಾರ ದೊಡ್ಡ ಬೆಲೆ ತೆರಬೇಕಾಗಬಹುದು ಎಂದು ಎಚ್ಚರಿಸಿದರು.ಮೈಸೂರು ಕಂಬಳ ವಿವಾದ ಕುರಿತು ಮಾತನಾಡಿದ ಅವರು, ಕಂಬಳಕ್ಕೆ ಬಿಜೆಪಿ ಸದಾ ಬೆಂಬಲ ನೀಡಿದೆ. ಸದಾನಂದ ಗೌಡ ಹಾಗೂ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ ಕಂಬಳಕ್ಕೆ ಅನುದಾನ ಹಾಗೂ ಪ್ರೋತ್ಸಾಹ ನೀಡಲಾಗಿತ್ತು. ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ರೈತರು, ಸ್ಥಳೀಯರು ಹಾಗೂ ಆಯೋಜಕರೊಂದಿಗೆ ಚರ್ಚಿಸಿ ಸರ್ಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ಬರ ಪರಿಸ್ಥಿತಿ ಕುರಿತು ಡಿ.ಕೆ. ಶಿವಕುಮಾರ್ ಕೇಂದ್ರಕ್ಕೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನೆರವು ಕೇಳುವುದು ರಾಜ್ಯ ಸರ್ಕಾರದ ಹಕ್ಕು. ಆದರೆ ಮೊದಲು ರಾಜ್ಯ ಸರ್ಕಾರ ತನ್ನ ಪಾಲಿನ ನೆರವನ್ನು ಘೋಷಿಸಿ ಬಳಿಕ ಕೇಂದ್ರದ ನೆರವು ಕೋರಬೇಕು. ಕೇಂದ್ರವನ್ನು ದೂರುವುದಕ್ಕಿಂತ ಸಮನ್ವಯದಿಂದ ಕೆಲಸ ಮಾಡುವುದು ಅಗತ್ಯ ಎಂದು ಹೇಳಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಅಪರಾಧ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಅವರು, ಮಾದಕ ವಸ್ತುಗಳ ಹಾವಳಿ, ಕೊಲೆ, ಸುಲಿಗೆ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದು ಗಂಭೀರ ವಿಷಯವಾಗಿದೆ. ಗೃಹ ಸಚಿವರು ಇತರ ವಿಚಾರಗಳಿಗಿಂತ ರಾಜ್ಯದ ಕಾನೂನು ಸುವ್ಯವಸ್ಥೆ ಮತ್ತು ಜನರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.


