ಮಂಜೇಶ್ವರ: ಮಳೆಗಾಲದ ಆಗಮನದೊಂದಿಗೆ ಜಲಾಶಯಗಳು, ಕೆರೆಗಳು ತುಂಬಿ ತುಳುಕುತ್ತಿದ್ದು, ಇದು ಮಕ್ಕಳ ಪಾಲಿಗೆ ‘ಜಲಕ್ರೀಡೆ’ಯ ಮೋಜಿನ ತಾಣವಾಗಿದ್ದರೆ, ಪೋಷಕರಿಗೆ ಮಾತ್ರ ಜೀವ ಕೈಯಲ್ಲಿ ಹಿಡಿದು ಕೂರುವ ಆತಂಕದ ದಿನಗಳಾಗಿವೆ.


ಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಾಚಲಿಕೆ, ಇಡಿಯ ಪಾಪಿಲ ಹಾಗೂ ಗೋವಿಂದ ಪೈ ಡ್ಯಾಂ ಪ್ರದೇಶಗಳಲ್ಲಿ ಅಪಾಯಕಾರಿ ರೀತಿಯಲ್ಲಿ ಈಜು ಪ್ರದರ್ಶನ ನಡೆಯುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ.

ಯಾವುದೇ ಮುನ್ನೆಚ್ಚರಿಕೆ ಇಲ್ಲದೆ, ಪೋಷಕರಿಗೆ ಸುಳಿವನ್ನೂ ನೀಡದೆ ಮಕ್ಕಳು ಗುಂಪು ಗುಂಪಾಗಿ ಈ ಕೆರೆಗಳ ಬಳಿಗೆ ತೆರಳುತ್ತಿದ್ದಾರೆ. ಅತಿ ಎತ್ತರದ ಸ್ಥಳಗಳಿಂದ ನೀರಿಗೆ ಜಿಗಿಯುವುದು ಮತ್ತು ಪರಸ್ಪರ ಪೈಪೋಟಿಗಿಳಿದು ಈಜು ಪ್ರದರ್ಶನ ನೀಡುವುದು ದಿನನಿತ್ಯದ ದೃಶ್ಯವಾಗಿದೆ. ಕೇವಲ ಸ್ಥಳೀಯರು ಮಾತ್ರವಲ್ಲದೆ, ದೂರದ ಊರುಗಳಿಂದಲೂ ಯುವಕರು ಇಲ್ಲಿಗೆ ಆಗಮಿಸುತ್ತಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ.

ಈಜಿನ ಮೋಜಿನ ಜೊತೆಗೆ, ಇಂತಹ ನಿರ್ಜನ ಮತ್ತು ಅಪಾಯಕಾರಿ ತಾಣಗಳಲ್ಲಿ ಮಾದಕ ದಂಧೆಯಂತಹ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಸ್ಥಳೀಯರಿಂದ ಕೇಳಿಬರುತ್ತಿದೆ. ಇದು ಕೇವಲ ಪ್ರಾಣಾಪಾಯವಷ್ಟೇ ಅಲ್ಲದೆ, ಸಾಮಾಜಿಕ ಪಿಡುಗುಗಳಿಗೂ ಇಂಬು ನೀಡುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ.
ಈ ಪ್ರದೇಶಗಳಲ್ಲಿ ಈಜುವುದನ್ನು ನಿಷೇಧಿಸಿ ಪೊಲೀಸ್ ಇಲಾಖೆ ಈಗಾಗಲೇ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಆದಾಗ್ಯೂ, ನಿಯಮಗಳನ್ನು ಗಾಳಿಗೆ ತೂರಿ ಈಜಲು ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಮಂಜೇಶ್ವರ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಬಾಚಲಿಕೆ ಕೆರೆಗೆ ದಾಳಿ ನಡೆಸಿ, ಅಪಾಯಕಾರಿ ಕೃತ್ಯದಲ್ಲಿ ತೊಡಗಿದ್ದ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕಠಿಣ ಕ್ರಮದ ಹೊರತಾಗಿಯೂ, ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಅತ್ಯಗತ್ಯ. ಮುಂದಾಗುವ ಅನಾಹುತಗಳನ್ನು ತಪ್ಪಿಸಲು ಸಾರ್ವಜನಿಕರು ಹಾಗೂ ಪೋಷಕರು ಜವಾಬ್ದಾರಿಯುತವಾಗಿ ವರ್ತಿಸಬೇಕಿದೆ.

