ಬಾದಾಮಿ:ಬಾದಾಮಿಯ ಖ್ಯಾತ ಜನಪದ ವಿದ್ವಾಂಸರು ಹಾಗೂ ಕೆರೂರಿನ ಶ್ರೀ ಕಾಳಿದಾಸ ಕಾಲೇಜಿನ ಪ್ರಾಂಶುಪಾಲರಾದ ಡಾ. ನಾಗರಾಜ್ ಎಂ. ಹಟ್ಟಿ ಅವರು ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ “ಅಂತರ್ ರಾಜ್ಯ ಕನ್ನಡ ಪಯಸ್ವಿನಿ ಜಾನಪದ ರತ್ನ – ಅಚೀವ್ಮೆಂಟ್ ಅವಾರ್ಡ್–2026” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಗಡಿನಾಡು ಕಾಸರಗೋಡಿನ ಕನ್ನಡ ಭವನದಲ್ಲಿ ಜುಲೈ 26ರಂದು ನಡೆಯಲಿರುವ ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಅವರ ಸಾರಥ್ಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಪತ್ರಿಕಾ ಪ್ರಕಟಣೆಯಲ್ಲಿ ಈ ಮಾಹಿತಿ ನೀಡಿದ್ದಾರೆ.

ಡಾ. ನಾಗರಾಜ್ ಎಂ. ಹಟ್ಟಿ ಅವರು ಜನಪದ ಸಾಹಿತ್ಯ ಮತ್ತು ಸಂಸ್ಕೃತಿಯ ಸಂರಕ್ಷಣೆ ಹಾಗೂ ಪ್ರಚಾರದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ್ದು, 500ಕ್ಕೂ ಹೆಚ್ಚು ಜನಪದ ಗೀತೆಗಳನ್ನು ಹಾಡಿದ್ದಾರೆ. ಅಲ್ಲದೆ, 475ಕ್ಕೂ ಅಧಿಕ ಜನಪದ ಸಾಹಿತ್ಯ ಕುರಿತ ಉಪನ್ಯಾಸಗಳನ್ನು ರಾಜ್ಯದ ವಿವಿಧೆಡೆ ನೀಡಿದ್ದಾರೆ.
ಜನಪದ ಕ್ಷೇತ್ರದಲ್ಲಿ ಸಲ್ಲಿಸಿರುವ ಅಪೂರ್ವ ಸೇವೆಗೆ ಗುರುತಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ 70ಕ್ಕೂ ಹೆಚ್ಚು ಪ್ರಶಸ್ತಿಗಳು ಇವರಿಗೆ ಲಭಿಸಿವೆ. ಇವರ ಸಾಧನೆಯನ್ನು ಪರಿಗಣಿಸಿ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ ಜಾನಪದ ರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.


