ಕಾಸರಗೋಡು : ಶಿಕ್ಷಣ ತಜ್ಞೆ, ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಸಾಹಿತಿ ಹಾಗೂ ಸಮಾಜಸೇವಕಿ ಡಾ. ಅನುರಾಧ ಕುರುಂಜಿ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಘೋಷಿಸಲಾಗಿದೆ.

ಗಡಿನಾಡು ಕಾಸರಗೋಡಿನ ಡಾ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಂಚಾಲಕತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ಕನ್ನಡ ಭವನ ಮತ್ತು ಗ್ರಂಥಾಲಯ ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಡಾ. ಅನುರಾಧ ಕುರುಂಜಿ ಅವರಿಗೆ ನೀಡಲು ಆಯ್ಕೆ ಮಾಡಿದೆ.

ವೃತ್ತಿಯಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಡಾ. ಅನುರಾಧ ಕುರುಂಜಿ ಅವರು ಪ್ರವೃತ್ತಿಯಲ್ಲಿ ತರಬೇತುದಾರ್ತಿ, ಸಮಾಜಸೇವಕಿ, ಕವಯತ್ರಿ, ಲೇಖಕಿ ಹಾಗೂ ಹಲವಾರು ಕೃತಿಗಳ ಕರ್ತೃವಾಗಿದ್ದು, ಶಿಕ್ಷಣ, ಸಾಹಿತ್ಯ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸಲ್ಲಿಸಿರುವ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಜುಲೈ 26ರಂದು ಕನ್ನಡ ಭವನದಲ್ಲಿ ನಡೆಯಲಿರುವ ರಜತ ಸಂಭ್ರಮ ಸಮಾರೋಪ ಸಮಾರಂಭ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

